ಪ್ರವೀಣ್ ಪೂಜಾರಿ ಕುಟುಂಬಕ್ಕೆ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರ ಭೇಟಿ
ಮಂಗಳೂರು, ಆ. 20: ಗೋಸಾಗಾಟ ಆರೋಪದಲ್ಲಿ ಬ್ರಹ್ಮಾವರದ ಕೊಕ್ಕರ್ಣೆಯಲ್ಲಿ ಪ್ರವೀಣ್ ಪೂಜಾರಿ ಹತ್ಯೆಗೈದ ಸಂಘಪರಿವಾರದ ಕಾರ್ಯಕರ್ತರ ಕೃತ್ಯವನ್ನು ಆಮ್ ಆದ್ಮಿ ಪಾರ್ಟಿ ತೀವ್ರವಾಗಿ ಖಂಡಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಆಪ್‌ನ ರಾಜ್ಯ ಸಹ ಸಂಚಾಲಕಿ ಶಾಂತಲಾ ದಾಮ್ಲೆ, ಕರಾವಳಿ ಭಾಗದಲ್ಲಿ ಹಲವಾರು ವರ್ಷಗಳಿಂದ ವ್ಯಾಪಕವಾಗಿ ನೈತಿಕ ಪೊಲೀಸ್ ಗಿರಿಯ ಹೆಸರಿನಲ್ಲಿ ಸಾರ್ವಜನಿಕರ ಮೇಲೆ ದೌರ್ಜನ್ಯ ನಡೆಸುತ್ತಿರುವವರನ್ನು ಬಂಧಿಸಿ ಕಾನೂನು ಕ್ರಮಗೊಳ್ಳಲು ಜಿಲ್ಲಾಡಳಿತ ವಿಫಲವಾದ ಹಿನ್ನೆಲೆಯಲ್ಲಿ ಪ್ರವೀಣ್ ಪೂಜಾರಿಯವರ ಹತ್ಯೆ ನಡೆದಿದೆ. ಸಮಾಜಘಾತುಕ ಶಕ್ತಿಗಳು ಬೆಳೆಯುತ್ತಿದ್ದು, ಜನರು ಭಯದ ವಾತಾವರಣದಲ್ಲಿ ದಿನ ದೂಡುತ್ತಿದ್ದಾರೆ. ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿದ್ದ ಹಲ್ಲೆ, ಕೊಲೆ ಈಗ ಇತರ ವರ್ಗದವರಿಗೆ ವಿಸ್ತರಣೆ ಆಗುತ್ತಿರುವುದು ಈ ಸಮಾಜ ಘಾತುಕ ಶಕ್ತಿಗಳ ಕರಾಳ ಹಸ್ತ ಎಲ್ಲಾ ಕಡೆ ವಿಸ್ತರಿಸಿದೆ ಎಂಬುದರ ಸೂಚನೆಯಾಗಿದೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಗೋರಕ್ಷಕರ ಬಗ್ಗೆ ಎಚ್ಚರಿಕೆ ಮತ್ತು ಕಠಿಣ ಕ್ರಮದ ಭರವಸೆ ನೀಡಿದ ಕೆಲವೇ ದಿನದಲ್ಲಿ ತನ್ನದೇ ಪಕ್ಷದ ಕಾರ್ಯಕರ್ತ ಹತ್ಯೆಯಾಗಿರುವುದು ಅವರ ಹೇಳಿಕೆಯ ಗಂಭೀರತೆ ಮತ್ತು ಪ್ರಭಾವದ ಬಗ್ಗೆ ಸಂಶಯ ಉಂಟು ಮಾಡುತ್ತಿದೆ. ಗೋರಕ್ಷಣೆ ಹೆಸರಿನಲ್ಲಿ ಗುಂಡಾಗಿರಿಯನ್ನು ಬೆಂಬಲಿಸುವ ಕಾರ್ಯದಲ್ಲಿ ನಿರತರಾಗಿದ್ದ ಬಿಜೆಪಿ ಇಂದು ತಮ್ಮದೇ ಪಕ್ಷದ ಕಾರ್ಯಕರ್ತನನ್ನು ಕಳೆದುಕೊಂಡಿದೆ. ಈ ಪ್ರಕರಣವನ್ನು ಅವಘಡ ಎಂದು ಬಿಂಬಿಸಲು ಪ್ರವೀಣ್ ಪೂಜಾರಿಯವರ ಕುಟುಂಬ ವರ್ಗದ ಮೇಲೆ ಬಾಹ್ಯ ಶಕ್ತಿಗಳು ಒತ್ತಡ ಹೇರುತ್ತಿರುವ ಬಗ್ಗೆ ವರದಿಯಾಗಿದ್ದು ಇದು ಖಂಡನೀಯ ಎಂದರು.
ರಾಜ್ಯ ಸರಕಾರವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.