ಚುಟುಕು ಸುದ್ದಿಗಳು

Update: 2016-08-20 18:28 GMT

ಪ್ರವೀಣ್ ಪೂಜಾರಿ ಹತ್ಯೆ ವಿರೋಧಿಸಿ ಪ್ರತಿಭಟನೆ
  ಉಡುಪಿ, ಆ.20: ಗೋರಕ್ಷಣೆಯ ಹೆಸರಿನಲ್ಲಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರು, ದಲಿತರು ಹಾಗೂ ಇದೀಗ ಹಿಂದುಳಿದ ವರ್ಗಗಳ ಮೇಲೆ ಹಲ್ಲೆ ನಡೆಸುತ್ತಿರುವ ಸಂಘ ಪರಿವಾರದ ಗೋರಕ್ಷಕರನ್ನು ನಕಲಿಗಳು ಎಂದು ಕಾಂಗ್ರೆಸ್ ಬಹು ಕಾಲದಿಂದ ಹೇಳುತ್ತಾ ಬಂದಿತ್ತು. ಇದೀಗ ಪ್ರಧಾನಿಯವರೇ ಈ ಮಾತನ್ನು ಪುನರುಚ್ಚರಿಸುವ ಮೂಲಕ ನಮ್ಮ ಹೇಳಿಕೆಯನ್ನು ಸಾಬೀತುಪಡಿಸಿದ್ದಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ ಹೇಳಿದ್ದಾರೆ.
ಗೋರಕ್ಷಣೆಯ ಹೆಸರಿನಲ್ಲಿ ಮಾನವ ಹತ್ಯೆ ವಿರೋಧಿಸಿ ಉಡುಪಿ ಬ್ಲಾಕ್ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಇಂದು ಉಡುಪಿಯ ಸರ್ವಿಸ್ ಬಸ್ ನಿಲ್ದಾಣದ ಬಳಿಯ ಗಾಂಧಿ ಪ್ರತಿಮೆಯ ಎದುರು ಹಮ್ಮಿಕೊಳ್ಳಲಾದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಎಂ.ಎ.ಗಫೂರ್, ಉದ್ಯಾವರ ನಾಗೇಶ್ ಕುಮಾರ್, ಜನಾರ್ದನ ಕೊಡವೂರು, ಅಮೃತ ಶೆಣೈ, ನರಸಿಂಗ ಮೂರ್ತಿ, ರಮೇಶ್ ಕಾಂಚನ್, ಮಲ್ಲಿಕಾ ಬಾಲಕೃಷ್ಣ ಪೂಜಾರಿ, ಮೀನಾಕ್ಷಿ ಮಾಧವ ಬನ್ನಂಜೆ, ಭಾಸ್ಕರ ರಾವ್ ಕಿದಿಯೂರು, ಹರೀಶ್ ಕಿಣಿ, ಹಬೀಬ್ ಅಲಿ ಮುಂತಾದವರು ಉಪಸ್ಥಿತರಿದ್ದರು.

ಪ್ರವೀಣ್ ಪೂಜಾರಿ ಹತ್ಯೆ
ಸಂಘಪರಿವಾರದ ಕೃತ್ಯಕ್ಕೆ ಪಾಪ್ಯುಲರ್ ಫ್ರಂಟ್ ಖಂಡನೆ
  ಬೆಂಗಳೂರು, ಆ.20: ಗೋಸಾಗಾಟದ ಆರೋಪದಲ್ಲಿ ಸಂಘಪರಿವಾರದ ಗೂಂಡಾಗಳು ಪ್ರವೀಣ್ ಪೂಜಾರಿಯನ್ನು ಥಳಿಸಿ ಹತ್ಯೆಗೈದ ಪೈಶಾಚಿಕ ಘಟನೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತೀವ್ರವಾಗಿ ಖಂಡಿಸಿದೆ. ಕೇವಲ ಹೇಳಿಕೆಗಳಿಂದ ಈ ಕುಖ್ಯಾತ ಗೋರಕ್ಷಕರನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂಬುವುದನ್ನು ಪ್ರಧಾನಿ ಮೋದಿಯವರು ಗಮನದಲ್ಲಿಡಬೇಕಾಗುತ್ತದೆ. ಹಿಂದುಳಿದ ಸಮುದಾಯದ ನಾಯಕರೂ ಸಂಘಪರಿವಾರದ ದುಷ್ಟ ಯೋಜನೆಗಳ ಕುರಿತು ತಮ್ಮ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಮುಂದಾಗಬೇಕೆಂದು ಯಾಸಿರ್ ಹಸನ್ ತಿಳಿಸಿದ್ದಾರೆ

ಬಂಟ್ವಾಳ: ವಿವಿಧ ಹಬ್ಬಗಳ ಹಿನ್ನೆಲೆಯಲ್ಲಿ ಶಾಂತಿ ಸಭೆ
ಬಂಟ್ವಾಳ, ಆ.20: ದ.ಕ. ಜಿಲ್ಲೆಯ ಅತೀ ಕೋಮು ಸೂಕ್ಷ್ಮ ಪ್ರದೇಶವೆಂದು ಗುರು ತಿಸಿರುವ ಬಂಟ್ವಾಳ ತಾಲೂಕು ಪ್ರಸಕ್ತ ದಿನಗಳಲ್ಲಿ ಶಾಂತಿಯ ತಾಣವಾಗಿ ಮಾರ್ಪ ಡುತ್ತಿದ್ದು ಮುಂದಿನ ದಿನಗಳಲ್ಲೂ ಇದೇ ಸ್ಥಿತಿ ಮುಂದುವರಿಯಲು ಎಲ್ಲ ಧರ್ಮ, ವರ್ಗಗಗಳ ಜನರು ಸಹಕಾರ ನೀಡಬೇಕು ಎಂದು ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ರವೀಶ್ ಸಿ.ಆರ್. ಮನವಿ ಮಾಡಿದರು. ಅವರು ಶ್ರೀ ಕೃಷ್ಣ ಜನ್ಮಾಷ್ಟಮಿ, ಗಣೇಶೋತ್ಸವ, ಶಾರದ ಹಬ್ಬ, ಈದುಲ್ ಅರಝ್ಹಾ, ಮೋಂತಿ ಹಬ್ಬ ಸಹಿತ ಮುಂದಿನ ದಿನಗಳಲ್ಲಿ ಬರುವ ವಿವಿಧ ಹಬ್ಬಗಳ ಹಿನ್ನೆಲೆಯಲ್ಲಿ ಬಂಟ್ವಾಳ ನಗರ ಠಾಣೆಯಲ್ಲಿ ಶನಿವಾರ ನಡೆದ ವಿವಿಧ ಧರ್ಮ, ಸಂಘಟನೆಗಳ ಮುಖಂಡರ ಶಾಂತಿ ಸಭೆಯಲ್ಲಿ ಮಾತನಾಡಿದರು. ಬಂಟ್ವಾಳ ವೃತ್ತ ನಿರೀಕ್ಷಕ ಮಂಜಯ್ಯ, ಜೆಡಿಎಸ್ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹಾರೂನ್ ರಶೀದ್, ಬಿಜೆಪಿ ಮುಖಂಡ ಜಿ.ಆನಂದ್, ಪ್ರಭಾಕರ್ ದೈವಗುಡ್ಡೆ, ಬಂಟ್ವಾಳ ನಗರ ಠಾಣೆ ಉಪನಿರೀಕ್ಷಕ ನಂದಕುಮಾರ್, ಗ್ರಾಮಾಂತರ ಠಾಣೆ ಉಪನಿರೀಕ್ಷ ಎ.ಕೆ.ರಕ್ಷಿತ್ ಗೌಡ, ಅಪರಾಧ ವಿಭಾಗದ ಎಸ್ಸೈ ಗಂಗಾಧರ್ ಉಪಸ್ಥಿತರಿದ್ದರು. ನಗರ ಠಾಣೆಯ ಎಎಸ್ಸೈ ರಘುರಾಮ ಹೆಗ್ಡೆ ಸ್ವಾಗತಿಸಿದರು. ಟ್ರಾಫಿಕ್ ಠಾಣೆ ಎಸ್ಸೈ ಚಂದ್ರಶೇಖರಯ್ಯ ವಂದಿಸಿದರು..

ಇಡಬೆಟ್ಟು ಸರಕಾರಿ ಶಾಲೆಯ ಶಿಕ್ಷಕರ ವರ್ಗಾವಣೆ
ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕಾರ, ಪೋಷಕರ ಪ್ರತಿಭಟನೆ

ಪುತ್ತೂರು, ಆ.20: ಇಲ್ಲಿನ ಕುರಿಯ ಗ್ರಾಮದ ಇಡಬೆಟ್ಟು ಸ.ಕಿ.ಪ್ರಾ. ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರ ವರ್ಗಾವಣೆ ವಿರೋಧಿಸಿ ತರಗತಿ ಬಹಿಷ್ಕರಿಸಿದ ಮತ್ತು ಪೋಷಕರು ಶಾಲೆಯ ಎದುರು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ. ಶಾಲೆಗೆ ಶಿಕ್ಷಕರ ವ್ಯವಸ್ಥೆಯಾಗುವ ತನಕ ನಾವು ಪ್ರತಿಭಟನೆ ನಡೆಸುತ್ತೇವೆ. ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪೋಷಕರು ಎಚ್ಚರಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ನಾಸಿರ್ ಇಡಬೆಟ್ಟು, ತಾಪಂ ಮಾಜಿ ಸದಸ್ಯ ಬೂಡಿಯಾರ್ ಪುರುಷೋತ್ತಮ ರೈ , ಹಿರಿಯ ವಿದ್ಯಾರ್ಥಿ ಮುಖಂಡೆ ಮಾಲತಿ, ನೀನಾ ಕುವೆಲ್ಲೋ, ಹೇಮಾವತಿ, ಪುಷ್ಪಾ, ಕುಸುಮಾ, ಪವಿತ್ರಾ, ಕುಸುಮಾ ಕರೆಜ್ಜ, ಶೀನ, ಮೀನಾಕ್ಷಿ, ಆಮೀನಾ, ನೆಬಿಸಾ, ದಿಲ್‌ಶಾದ್, ಶಬನಾ, ಸುಂದರಿ, ಕಮಲಾ, ಸುರೇಶ್, ಮುಸ್ತಫಾ, ಯಾಹಿಯಾ, ರಿಯಾಝ್, ಚೆನ್ನಕೇಶವ, ಅಶೋಕ್, ಉಮೇಶ್, ಕೃಷ್ಣ ಮಣಿಯಾಣಿ, ಈಶ್ವರ ಕಟ್ಟದಬೈಲ್, ಅಹ್ಮದ್, ಇಲಿಯಾಸ್, ಶೇಖರ, ಹರಿಣಾಕ್ಷಿ, ಧನು, ರಂಜಿತ್, ಬಲ್ಕೀಸ್, ಶ್ರೀಧರ ಮಣಿಯಾಣಿ, ಲೀಲಾವತಿ, ಪ್ರಶಾಂತ್ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಇಂದು ಅಮಿತ್ ಶಾ ಉಳ್ಳಾಲಕ್ಕೆ
ಉಳ್ಳಾಲ, ಆ.20: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ರಾಣಿ ಅಬ್ಬಕ್ಕ ಬಲಿದಾನ ಸ್ಮರಣೆಯ ಕಾರ್ಯಕ್ರಮಕ್ಕೆ ಉಳ್ಳಾಲಕ್ಕೆ ಆ.21ರಂದು ಆಗಮಿಸುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಶನಿವಾರ ಸಂಜೆ ಉಳ್ಳಾಲ ಮತ್ತು ಕೊಣಾಜೆ ವಿವಿ ಮಂಗಳಾ ಸಭಾಂಗಣಕ್ಕೆ ಭೇಟಿ ನೀಡಿ ಸಿದ್ಧತೆಯನ್ನು ಪರಿಶೀಲಿಸಿದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯ ದರ್ಶಿ ಅರುಣ್ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲು, ಬಿಜೆಪಿ ಜಿಲ್ಲಾ ವಕ್ತಾರ ಜಿತೇಂದ್ರ ಕೊಠ್ಠಾರಿ,ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಮಿತಾ ಶ್ಯಾಮ್ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್ ಉಪಸ್ಥಿತರಿದ್ದರು.

ಮೀನುಗಾರರಿಗೆ ಎಚ್ಚರಿಕೆ
ಉಡುಪಿ, ಆ.20: ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಪಶ್ಚಿಮ ಕರಾವಳಿಯ ಸಮುದ್ರ ತೀರದಲ್ಲಿ ಗಂಟೆಗೆ 45ರಿಂದ 55 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ ಎಂದು ಹವಾ ಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಇಂದು ಮೂಳೂರುನಲ್ಲಿ ಜಲಾಲಿಯ್ಯ ಮಜ್ಲಿಸ್
ಮೂಳೂರು, ಆ.20: ಮರ್ಕಝ್ ತಅಲೀಮಿಲ್ ಇಹ್ಸಾನ್ ಮೂಳೂರು ನಲ್ಲಿ ಪ್ರತಿ ತಿಂಗಳು ನಡೆಯುವ ಜಲಾಲಿಯ್ಯಾ ದ್ಸಿಕ್ರ್ ಮಜ್ಲಿಸ್ ಆ.21 ರಂದು ಮಗ್ರಿಬ್ ನಮಾಝ್ ಬಳಿಕ ನಡೆಯಲಿದೆ. ಅಸೈಯದ್ ಕೆ.ಎಸ್. ಜಾಫರ್ ಸ್ವಾದಿಕ್ ತಂಙಳ್ ಕುಂಬೋಳ್‌ರವರ ನೇತೃತ್ವದಲ್ಲಿ ನಡೆಯುವ ಕಾರ್ಯ ಕ್ರಮದಲ್ಲಿ ಕೆ.ಎಸ್. ಮುಕ್ತಾರ್ ತಂಙಳ್ ಕುಂಬೋಳ್ ಹಾಗೂ ಇತರ ಸಾದಾತ್‌ಗಳು, ಉಲಮಾಗಳು ಭಾಗ ವಹಿಸಲಿದ್ದಾರೆಂದು ಸಂಸ್ಥೆಯ ಮ್ಯಾನೇ ಜರ್ ಯು.ಕೆ. ಮುಸ್ತಫಾ ಸಅದಿ ಪ್ರಕ ಟನೆಯಲ್ಲಿ ತಿಳಿಸಿದ್ದಾರೆ.

ಆ.23:ಯುವಸೌರಭ ಸಾಂಸ್ಕೃತಿಕ ಕಾರ್ಯಕ್ರಮ
ಮಂಗಳೂರು, ಆ.20: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕ.ಜಿಲ್ಲೆ, ಮಂಗಳೂರು ಇಲಾಖಾ ವತಿ ಯಿಂದ 15ವರ್ಷದಿಂದ 30 ವರ್ಷ ದೊಳಗಿನ ಪ್ರತಿಭಾವಂತ ಯುವ ಕಲಾವಿದರನ್ನು ಪ್ರೋತ್ಸಾಹಿಸುವ ಸಲುವಾಗಿ ಯುವಸೌರಭ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಆ.23ರಂದು ನಡೆಯಲಿದೆ. ಅಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಮುಡಿಪುವಿನ ಗೋಪಾಲಕೃಷ್ಣ ಸಭಾಗೃಹದಲ್ಲಿ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸುವರು.
ಸಚಿವ ಯು.ಟಿ. ಖಾದರ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಕುಂತಳಾ ಶೆಟ್ಟಿ, ದ.ಕ. ಜಿಲ್ಲಾಧಿಕಾರಿ ಹಾಗೂ ಜನ ಪ್ರತಿನಿಧಿಗಳು ಭಾಗವಹಿಸಲಿರುವರು ಎಂದು ಪ್ರಕಟನೆ ತಿಳಿಸಿದೆ.

ಸೈಂಟ್ ಆ್ಯಗ್ನೆಸ್ ಕಾಲೇಜಿನಲ್ಲಿ ತಿರಂಗಾ ಯಾತ್ರೆಗೆ ಚಾಲನೆ
ಮಂಗಳೂರು, ಆ.20: ರಾಷ್ಟ್ರೀಯತೆ, ದೇಶಭಕ್ತಿ ಮತ್ತು ಸೌಹಾರ್ದವನ್ನು ಯುವ ಜನರಲ್ಲಿ ಮತ್ತು ಜನಸಾಮಾನ್ಯರಲ್ಲಿ ಹೆಚ್ಚಿಸುವ ನಿಟ್ಟಿನಲ್ಲಿ ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯವು ನೆಹರೂ ಯುವ ಕೇಂದ್ರದ ಮೂಲಕ ತಿರಂಗಾ ಯಾತ್ರೆಯನ್ನು ನಗರದ ಬೆಂದೂರ್‌ನ ಸೈಂಟ್ ಆ್ಯಗ್ನೆಸ್ ಕಾಲೇಜು ಬಳಿ ಹಮ್ಮಿಕೊಳ್ಳಲಾಯಿತು. ಶಾಸಕ ಜೆ. ಆರ್. ಲೋಬೊ, ಕಾಲೇಜು ಪ್ರಾಂಶುಪಾಲೆ ಸಿ. ಡಾ. ಜಸ್ವಿನಾ, ನೆಹರೂ ಯುವ ಕೇಂದ್ರ ಮಂಗಳೂರು ಇನ್‌ಚಾರ್ಜ್ ಸಿಂಥಿಯಾ ಲೋಬೊ, ಆ್ಯಗ್ನೆಸ್ ಕಾಲೇಜಿನ ಎನ್‌ಸಿಸಿ ಅಧಿಕಾರಿ ಡಾ. ನಾಗೇಶ್, ಎನ್ನೆಸ್ಸೆಸ್ ಅಧಿಕಾರಿ ಡಾ. ಉದಯಕುಮಾರ್, ರೇಂಜರ್ಸ್‌ ಅಸೋಸಿಯೇಶನ್ ಸಂಚಾಲಕಿ ನಮಿತಾ, ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಚಂದ್ರಮೋಹನ್ ಮರಾಠೆ ಉಪಸ್ಥಿತರಿದ್ದರು.

ಗೋರಕ್ಷಕರ ಕೃತ್ಯ ವಿರೋಧಿಸಿ ಪಿಎಫ್‌ಐ ಪ್ರತಿಭಟನೆ
ಕುಂದಾಪುರ, ಆ.20: ಪ್ರಚೋದನಕಾರಿ ಭಾಷಣಗಳಿಂದ ಮಾನವ ಹತ್ಯೆ ನಡೆಯಲು ಕಾರಣವಾಗಿರುವ ಸಂಘಪರಿವಾರದ ಶಾಖೆಗಳಿಗೆ ಬೀಗ ಜಡಿಯಬೇಕಾಗಿದೆ ಎಂದು ಪಿಎಫ್‌ಐ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಹೇಳಿದ್ದಾರೆ.
ಗೋರಕ್ಷಕಣೆ ಹೆಸರಿನಲ್ಲಿ ಅಲ್ಪಸಂಖ್ಯಾತ, ದಲಿತ, ಹಿಂದುಳಿದವರ್ಗದವರ ಮೇಲಿನ ಅನೈತಿಕ ಪೊಲೀಸ್‌ಗಿರಿಯನ್ನು ಖಂಡಿಸಿ ಪಿಎಫ್‌ಐ ಕುಂದಾಪುರ ತಾಲೂಕು ಸಮಿತಿ ವತಿಯಿಂದ ಶನಿವಾರ ಕುಂದಾಪುರ ಶಾಸ್ತ್ರಿ ವೃತ್ತದ ಬಳಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಪಿಎಫ್‌ಐ ಉಡುಪಿ ಜಿಲ್ಲಾ ಕಾರ್ಯದರ್ಶಿ ಅಲಾಮ್ ಬ್ರಹ್ಮಾವರ, ತಾಲೂಕು ಕಾರ್ಯದರ್ಶಿ ಮೌಲಾನಾ ಮೋಝಮ್ ಮುಫ್ತಿ, ತಾಲೂಕು ಅಧ್ಯಕ್ಷ ಹನೀಫ್ ಮತ್ತಿತರರು ಉಪಸ್ಥಿತರಿದ್ದರು.

ಮೃತ ವ್ಯಕ್ತಿಯ ಗುರುತು ಪತ್ತೆಗೆ ಮನವಿ
ಉಡುಪಿ, ಆ.20: ಉಡುಪಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿಯ ಲಾಡ್ಜ್‌ನಲ್ಲಿ ಎಸ್. ವಿಶ್ವನಾಥನ್ ತಮಿಳುನಾಡು ಎಂಬ ಸುಮಾರು 65 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬರು ಆ.17ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎಣ್ಣೆಕಪ್ಪು ಮೈಬಣ್ಣ, 5.6 ಅಡಿ ಎತ್ತರ, ನೀಲಿ ಟಿ ಶರ್ಟ್, ಕೆಂಪು ಬಣ್ಣದಪ್ಯಾಂಟ್ ಧರಿಸಿದ್ದಾರೆ. ಈ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

ದನಕ್ಕೆ ಬೈಕ್ ಢಿಕ್ಕಿ: ಸವಾರ ಮೃತ್ಯು
 ಬೈಂದೂರು, ಆ.20: ರಸ್ತೆಗೆ ಅಡ್ಡ ಬಂದ ದನಕ್ಕೆ ಬೈಕೊಂದು ಢಿಕ್ಕಿ ಹೊಡೆದ ಪರಿಣಾ ಸವಾರ ಮೃತಪಟ್ಟ ಘಟನೆ ಮಯ್ಯಿಡಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬಳಿ ನಡೆದಿದೆ. ಮೃತರನ್ನು ಸೇನೇಶ್ವರ ದೇವಸ್ಥಾನ ಬಳಿಯ ನಿವಾಸಿ ರವಿ ದೇವಾಡಿಗ ಎಂದು ಗುರುತಿಸಲಾಗಿದೆ. ಇವರು ಆ.20ರಂದು ಬೆಳಗ್ಗೆ ಉಪ್ಪುಂದ ಕಡೆಯಿಂದ ಬೈಂದೂರು ಕಡೆಗೆ ಬೈಕಿನಲ್ಲಿ ಹೋಗುತ್ತಿದ್ದಾಗ ದನವೊಂದು ರಸ್ತೆಗೆ ಅಡ್ಡ ಬಂದಿದೆ. ಇದರ ಪರಿಣಾಮ ಬೈಕ್ ದನಕ್ಕೆ ಢಿಕ್ಕಿ ಹೊಡೆದು ರವಿ ದೇವಾಡಿಗ ರಸ್ತೆ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡು ಕುಂದಾಫುರ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನುಮಾನಾಸ್ಪದವಾಗಿ ಯುವಕ ಮೃತ್ಯು
ಕುಂದಾಪುರ, ಆ.20: ಆನಗಳ್ಳಿ ಗ್ರಾಮದ ಸಂಗಮ್ ಹೊಸ ಸೇತುವೆ ನಿರ್ಮಾಣದ ದಂಡೆಯ ಬಳಿ ವ್ಯಾಪಾರಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಕುಂದಾಪುರ ಆದರ್ಶ ಆಸ್ಪತ್ರೆ ಬಳಿ ನಿವಾಸಿ ಗಣೇಶ(36) ಎಂದು ಗುರುತಿಸಲಾಗಿದೆ. ಇವರು ಆ.17ರಂದು ಸಂಜೆ ತನ್ನ ಸಹೋದರ ರತ್ನಾಕರ ಎಂಬವರ ಮನೆಗೆ ಬಂದು ಹೋದವರು ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಶನಿವಾರ ಬೆಳಗ್ಗೆ ಮೃತದೇಹವು ಸೇತುವೆ ಸಮೀಪ ಪತ್ತೆಯಾಗಿದ್ದು, ಸಾವಿಗೆ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಪ್ರತ್ಯೇಕ ಪ್ರಕರಣ: ಇಬ್ಬರ ನಾಪತ್ತೆ
ಕಾಪು, ಆ.20: ಏಣಗುಡ್ಡೆ ಗ್ರಾಮದ ಈಸ್ಟರ್ ಗೇಟ್ ನಿವಾಸಿ ಜಾನ್ ಮೊಂತೆರೊ ಎಂಬವರ ಮಗ, ನಿಟ್ಟೆ ಕಾಲೇಜಿನ ಮೂರನೆ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಜುಡ್ಸನ್ ಮೊಂತೆರೋ(20) ಆ.18ರಂದು ಕಾಲೇಜಿಗೆ ಹೋದವರು ಈವರೆಗೆ ವಾಪಸ್ ಬಾರದೆ ನಾಪತ್ತೆಯಾಗಿದ್ದಾರೆೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿ: ದೊಡ್ಡಣಗುಡ್ಡೆಯ ಮುಹಮ್ಮದ್ ಶರೀಫ್ ಎಂಬವರ ಮಗ ಮೂಡುಬೆಳ್ಳೆಯ ಜ್ಞಾನಗಂಗಾ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿ ಮಿರ್ಜಾ ಹುಸೇನ್(16) ಆ.18ರಂದು ಮನೆಯಿಂದ ಹೋದವರು ನಾಪತ್ತೆಯಾಗಿದಾರೆೆ. ಈ ಬಗ್ಗೆ ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
ಕಾಪು, ಆ.20:ವೈಯಕ್ತಿಕ ಕಾರಣದಿಂದ ಮನನೊಂದು ಉದ್ಯಾವರ ಗ್ರಾಮದ ಸಂಪಿಗೆ ನಗರ ನಿವಾಸಿ ಸತೀಶ್ ಮಾರ್ಲ ಎಂಬವರ ಪತ್ನಿ ಶಾಂತಾ(61) ಆ.18ರಂದು ರಾತ್ರಿ ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂದಾಪುರ: ಯಡ್ತಾಡಿ ಗ್ರಾಮದ ಕೇಸಾಪುರಕೂಡ್ಲಿ ನಿವಾಸಿ ನರಸಿಂಹ ನಾಯ್ಕ ಎಂಬವರ ಪತ್ನಿ ರತ್ನಾ(43) ಆ.19ರಂದು ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೆರ್ಲ: ಗೃಹಿಣಿ ನಾಪತ್ತೆ
ಕಾಸರಗೋಡು, ಆ.20: ಬದಿಯಡ್ಕದ ಪೆರ್ಲದಲ್ಲಿ ಗೃಹಿಣಿಯೊಬ್ಬರು ನಾಪತ್ತೆಯಾದ ಘಟನೆ ನಡೆದಿದೆ. ಪೆರ್ಲ ಗುರಿ ನೇರೋಳುವಿನ ಪದ್ಮಲೀಲಾ(40) ಎಂಬವರು ನಾಪತ್ತೆಯಾದವರು.
ಶುಕ್ರವಾರ ಸಂಜೆ ಮನೆಯಿಂದ ಪದ್ಮಲೀಲಾ ನಾಪತ್ತೆಯಾಗಿದ್ದರು. ಹಲವಡೆ ಶೋಧ ನಡೆಸಿದರೂ ಪತ್ತೆಯಾಗದ ಹಿನ್ನಲೆಯಲ್ಲಿ ಅವರ ಪತಿ ಸುಬ್ಬಣ್ಣ ನಾಯ್ಕೆ ಪೊಲೀಸರಿಗೆ ದೂರು ನೀಡಿದ್ದಾರೆ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ರಾಜಕೀಯ
ಕಾರ್ಮಿಕ ವೇದಿಕೆಯಿಂದ ಪ್ರತಿಭಟನೆ

 ಉಡುಪಿ, ಆ.20: ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮ ನಾದವನು. ಇಂಥ ವ್ಯಕ್ತಿಯ ಹೆಸರನ್ನು ರಾಜಕೀಯವಾಗಿ ಬಳಸಿಕೊಂಡು ದುರುಪಯೋಗ ಪಡಿಸಿಕೊಳ್ಳುವುದನ್ನು ವಿರೋಧಿಸಿ ಕರ್ನಾಟಕ ಕಾರ್ಮಿಕರ ವೇದಿಕೆಯ ಉಡುಪಿ ಸಮಿತಿ ವತಿಯಿಂದ ನಗರದ ಬಸ್‌ನಿಲ್ದಾಣದ ಬಳಿಯ ಕ್ಲಾಕ್‌ಟವರ್ ಎದುರು ಶನಿವಾರ ಪ್ರತಿಭಟನೆ ನಡೆಯಿತು.
 ವೇದಿಕೆಯ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರು ಬಿಜೆಪಿಯ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ವಿರುದ್ಧ ಧಿಕ್ಕಾರ ಹಾಗೂ ಘೋಷಣೆಗಳನ್ನು ಕೂಗಿದರು. ತನ್ನ ರಾಜಕೀಯ ಗಟ್ಟಿತನವನ್ನು ಪ್ರದರ್ಶಿಸಲು ಈಶ್ವರಪ್ಪ ರಾಜಕೀಯ ದುರುದ್ದೇಶದಿಂದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ್ನು ಸ್ಥಾಪಿಸುತ್ತಿದ್ದಾರೆ ಎಂದು ದೂರಿದರು.
  ವೇದಿಕೆಯ ನಿಯೋಗ ಮಣಿಪಾಲ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಈ ಕುರಿತ ಮನವಿಯೊಂದನ್ನು ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಅವರಿಗೆ ಸಲ್ಲಿಸಿತು. ಪ್ರತಿಭಟನೆಯಲ್ಲಿ ವೇದಿಕೆಯ ಪದಾಧಿಕಾರಿಗಳಾದ ಕೆ.ಸುರೇಶ್ ಸೇರಿಗಾರ್, ರವಿಶಾಸ್ತ್ರಿ ಬನ್ನಂಜೆ, ಸೂರಜ್, ವೀರಣ್ಣ ಕುರುವತ್ತಿಗಡರ್, ಚಂದ್ರಪೂಜಾರಿ, ಗೋಪಾಲ ಆಚಾರ್ಯ, ಸಂದೀಪ್ ಕುಮಾರ್, ಸುಧಾಕರ ನಾಯಕ್, ಕೆನಿನ್ ನೆಲ್ಸನ್ ಸರಿತಾ ಮತ್ತಿತರರು ಉಪಸ್ಥಿತರಿದ್ದರು.

ಭಾಸ್ಕರ್ ಶೆಟ್ಟಿ ಹತ್ಯೆ ಆರೋಪಿಗಳ ಮಂಪರು ಪರೀಕ್ಷೆ ನಡೆಸಿ’
ಉಡುಪಿ, ಆ.20: ಉದ್ಯಮಿ ಭಾಸ್ಕರ್ ಶೆಟ್ಟಿ ಹತ್ಯೆ ವ್ಯವಸ್ಥಿತವಾದ ಕೊಲೆಯಾಗಿರುವುದರಿಂದ, ಇನ್ನೂ ಸರಿಯಾಗಿ ಹೇಳಿಕೆ ನೀಡದ ಬಂಧಿತ ಆರೋಪಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಪ್ರಕರಣದ ನಿಜ ಸಂಗತಿಗಳನ್ನು ಬಹಿರಂಗ ಪಡಿಸಬೇಕೆಂದು ಉಡುಪಿ ಜಿಲ್ಲಾ ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಐಕಳಬಾವ ಚಿತ್ತರಂಜನ್‌ದಾಸ್ ಶೆಟ್ಟಿ ಆಗ್ರಹಿಸಿದ್ದಾರೆ.
ಪ್ರಕರಣದ ಕುರಿತಂತೆ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆಕೊಡಿಸಲು ಸೂಕ್ತ ಕ್ರಮ ಜರಗಿಸದಿದ್ದಲ್ಲಿ ತುಳುನಾಡ ರಕ್ಷಣಾ ವೇದಿಕೆ ಇತರ ಸಂಘಟನೆಗಳ ಸಹಯೋಗದೊಂದಿಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಚಿತ್ತರಂಜನ್‌ದಾಸ್ ಶೆಟ್ಟಿ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

ಶ್ರೀಕೃಷ್ಣಾಷ್ಟಮಿ ಮಹೋತ್ಸವಕ್ಕೆ ಇಂದು ಚಾಲನೆ
ಉಡುಪಿ, ಆ.20: ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ನಡೆಯುವ ಶ್ರೀಕೃಷ್ಣಾಷ್ಟಮಿ ಮಹೋ ತ್ಸವದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸರಣಿ ಕಾರ್ಯಕ್ರಮಗಳಿಗೆ ಆ. 21ರಂದು ಸಂಜೆ 5:30ಕ್ಕೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಚಾಲನೆ ನೀಡಲಾಗುವುದು ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಶ್ರೀಕೃಷ್ಣಮಠದ ಬಡಗುಮಳಿಗೆಯಲ್ಲಿ ಶನಿವಾರ ನಡೆೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಕಾರವಾಳ ಶಾಸಕ ಸತೀಶ್ ಸೈಲ್, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಉಪಸ್ಥಿತರಿರುವರು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News