ಫುಟ್‌ಬಾಲ್: ಬ್ರೆಜಿಲ್‌ಗೆ ಐತಿಹಾಸಿಕ ಚಿನ್ನ ತಂದ ನೇಮರ್
ರಿಯೊ ಡಿ ಜನೈರೊ,ಆ.21: ತವರಿನ ಬೆಂಬಲಿಗರ ಹರ್ಷೋದ್ಗಾರಗಳ ನಡುವೆ ನಡೆದ ಫುಟ್‌ಬಾಲ್ ಚಿನ್ನದ ಪದಕ ಪಂದ್ಯದಲ್ಲಿ ಬಲಿಷ್ಠ ಜರ್ಮನಿ ತಂಡದ ವಿರುದ್ಧ ಪೆನಾಲ್ಟಿ ಶೂಟೌಟ್ 5-4 ಗೋಲುಗಳ ರೋಚಕ ಜಯ ಸಾಧಿಸಿದ ಅತಿಥೇಯ ಬ್ರೆಜಿಲ್ ಸ್ಮರಣೀಯ ಚಿನ್ನ ಗೆದ್ದಿತು.
ಇದು ಬ್ರೆಜಿಲ್‌ಗೆ ಪ್ರಪ್ರಥಮ ಫುಟ್‌ಬಾಲ್ ಚಿನ್ನದ ಪದಕವಾಗಿದೆ. ಫುಟ್‌ಬಾಲ್ ಪ್ರೇಮಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದ ಪಂದ್ಯದ ಹೆಚ್ಚುವರಿ ವೇಳೆಯಲ್ಲಿ ಕೂಡಾ ಉಭಯ ತಂಡಗಳು 1-1 ಗೋಲು ಸಮಬಲ ಸಾಧಿಸಿದ್ದವು. 120 ನಿಮಿಷಗಳ ಆಟದ ಬಳಿಕ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ಅಂತಿಮವಾಗಿ ನೇಮರ್ ಸಾಹಸದಿಂದ ಬ್ರೆಜಿಲ್ ಗೆಲುವಿನ ನಗೆ ಬೀರಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಉಭಯ ತಂಡಗಳು 4-4 ಸಮಬಲದಲ್ಲಿದ್ದಾಗ ಜರ್ಮನಿಯ ಪೀಟರ್ಸ್‌ಸನ್ ನೀಲ್ಸ್ ಹೊಡೆದ ಗೋಲನ್ನು ಬ್ರೆಜಿಲ್ ಗೋಲ್‌ಕೀಪರ್ ಯಶಸ್ವಿಯಾಗಿ ತಡೆದ ಬಳಿಕ, ಕೊನೆಯ ಪ್ರಯತ್ನದಲ್ಲಿ ಚೆಂಡನ್ನು ಗೋಲುಪೆಟ್ಟಿಗೆ ಸೇರಿಸಿದ ನೇಮರ್ ಈ ಐತಿಹಾಸಿಕ ಗೆಲುವಿನ ರೂವಾರಿ ಎನಿಸಿದರು.
ಭಾರತ ತನ್ನ ಒಲಿಂಪಿಕ್ಸ್ ಅಭಿಯಾನವನ್ನು ಬಹುತೇಕ ಮುಗಿಸಿದ್ದು ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕದೊಂದಿಗೆ 66ನೇ ಸ್ಥಾನದಲ್ಲಿದೆ. ಅಮೆರಿಕ 41 ಚಿನ್ನ, 35 ಬೆಳ್ಳಿ ಹಾಗೂ 35 ಕಂಚಿನ ಪದಕ ಸೇರಿ 112 ಪದಕದೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 26 ಚಿನ್ನ, 22 ಬೆಳ್ಳಿ ಹಾಗೂ 16 ಕಂಚಿನ ಪದಕದೊಂದಿಗೆ 64 ಪದಕ ಪಡೆದ ಬ್ರಿಟನ್ ಎರಡನೇ ಸ್ಥಾನ ಹಾಗೂ 24 ಚಿನ್ನ ಸಹಿತ 68 ಪದಕ ಗೆದ್ದ ಚೀನಾ ಮೂರನೇ ಸ್ಥಾನದಲ್ಲಿದೆ.