×
Ad

ಟರ್ಕಿ: ಮದುವೆ ಸಮಾರಂಭದಲ್ಲಿ ಆತ್ಮಹತ್ಯಾ ಬಾಂಬ್; 50 ಸಾವು

Update: 2016-08-21 10:00 IST

ಅಂಕಾರ, ಆ. 21: ಸಿರಿಯ ಗಡಿಗೆ ಹೊಂದಿಕೊಂಡಿರುವ ಆಗ್ನೇಯ ಟರ್ಕಿಯ ನಗರ ಗಝಿಯನ್‌ಟೆಪ್‌ನಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭವೊಂದರ ಮೇಲೆ ಶನಿವಾರ ರಾತ್ರಿ ಓರ್ವ ಆತ್ಮಹತ್ಯಾ ಬಾಂಬರ್ ನಡೆಸಿದ ದಾಳಿಯಲ್ಲಿ ಕನಿಷ್ಠ 50 ಮಂದಿ ಮೃತಪಟ್ಟಿದ್ದಾರೆ ಹಾಗೂ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಕುರ್ದ್‌ಗಳು ಭಾಗವಹಿಸಿದ್ದ ಮದುವೆ ಸಮಾರಂಭದ ಮೇಲೆ ನಡೆದ ದಾಳಿಯನ್ನು ಐಸಿಸ್ ಭಯೋತ್ಪಾದಕ ಗುಂಪು ನಡೆಸಿರುವ ಸಾಧ್ಯತೆ ಇದೆ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಹೇಳಿದ್ದಾರೆ.

ದಾಳಿಯಲ್ಲಿ 50 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಿಕೆಯೊಂದರಲ್ಲಿ ಗಝಿಯನ್‌ಟೆಪ್ ಗವರ್ನರ್ ಅಲಿ ಯೆರ್ಲಿಕಯ ತಿಳಿಸಿದರು.

ಅಮೆರಿಕದಲ್ಲಿ ನೆಲೆಸಿರುವ ಧರ್ಮಗುರು ಫತೇವುಲ್ಲಾ ಗುಲೇನ್‌ರ ಗುಂಪು, ನಿಷೇಧಿತ ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ (ಪಿಕೆಕೆ) ಮತ್ತು ಐಸಿಸ್‌ಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಎರ್ದೊಗಾನ್ ಹೇಳಿಕೆಯೊಂದರಲ್ಲಿ ಹೇಳಿದ್ದಾರೆ. ಕಳೆದ ತಿಂಗಳು ಟರ್ಕಿಯಲ್ಲಿ ನಡೆದ ವಿಫಲ ಸೇನಾ ದಂಗೆಯ ರೂವಾರಿ ಫತೇವುಲ್ಲಾ ಎಂದು ಟರ್ಕಿ ಆರೋಪಿಸುತ್ತಿದೆ.

‘‘ನಮ್ಮ ಮೇಲೆ ಆಕ್ರಮಣ ಮಾಡುತ್ತಿರುವವರಿಗೆ ನಮ್ಮ ದೇಶ ಕೊಡುತ್ತಿರುವ ಸಂದೇಶ ಒಂದೇ- ನೀವು ಯಶಸ್ವಿಯಾಗುವುದಿಲ್ಲ’’ ಎಂದು ಅವರು ಹೇಳಿದ್ದಾರೆ.

ಮದುವೆ ಸಮಾರಂಭದಲ್ಲಿ ಕುರ್ದ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮದುಮಗ ಮತ್ತು ಮದುಮಗಳು ಕೂಡ ಕುರ್ದಿಶ್ ವಲಯ ಸೀರ್ಟ್‌ನವರಾಗಿದ್ದರು.

ಮದುಮಗ ಮತ್ತು ಮದುಮಗಳು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಅವರ ಜೀವಕ್ಕೆ ಅಪಾಯವಿಲ್ಲ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.

ಬಾಂಬರ್ 12-14 ವರ್ಷದ ವ್ಯಕ್ತಿ: ಎರ್ದೊಗಾನ್

ಮದುವೆ ಮನೆ ಮೇಲೆ ದಾಳಿ ನಡೆಸಿದ ಐಸಿಸ್ ಆತ್ಯಹತ್ಯಾ ಬಾಂಬರ್ 12ರಿಂದ 14 ವರ್ಷದ ವ್ಯಕ್ತಿ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಹೇಳಿದ್ದಾರೆ.

ರವಿವಾರ ಇಸ್ತಾಂಬುಲ್ ಸಿಟಿ ಹಾಲ್‌ನ ಎದುರುಗಡೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಟಿವಿ ಭಾಷಣದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News