×
Ad

ದಶಕಗಳಿಂದ ದುರಸ್ತಿಭಾಗ್ಯವನ್ನೇ ಕಂಡಿಲ್ಲ ಕಾಗೆಕಾನ ರಸ್ತೆ

Update: 2016-08-21 18:49 IST

ವಿಟ್ಲ, ಆ.21: ಎರಡು ಜಿಲ್ಲಾ ಪಂಚಾಯತ್ ಕ್ಷೇತ್ರಗಳು, ಮೂರು ತಾಲೂಕು ಪಂಚಾಯತ್ ಕ್ಷೇತ್ರಗಳು, ಮೂರು ಗ್ರಾಮ ಪಂಚಾಯತ್ ಕ್ಷೇತ್ರಗಳ ವ್ಯಾಪ್ತಿಗೊಳಪಟ್ಟ ಜಿಲ್ಲಾ ಪಂಚಾಯತ್ ರಸ್ತೆಯೊಂದು ದಶಕಗಳಿಂದ ದುರಸ್ತಿ ಕಾಣದೆ, ಆ ಭಾಗದ ಜನತೆ ನಡೆದಾಡಲೂ ಪರದಾಡುವಂತಹ ಸ್ಥಿತಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದೆ.

ರಾಷ್ಟ್ರೀಯ ಹೆದ್ದಾರಿ-75ರ ಮಾಣಿ ಸಮೀಪದ ಬುಡೋಳಿ ಜಂಕ್ಷನ್‌ನಿಂದ ಸೇರ ಮಾರ್ಗವಾಗಿ 5 ಕಿ.ಮೀ. ದೂರದ ಕಾಗೆಕಾನ ಎಂಬ ಊರಿಗೆ ಸಂಪರ್ಕಿಸುವ ಈ ರಸ್ತೆ ದಶಕಗಳಿಂದ ದುರಸ್ತಿ ಭಾಗ್ಯವನ್ನೇ ಕಂಡಿಲ್ಲ. ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೊಳಪಟ್ಟ ಈ ಜಿಲ್ಲಾ ಪಂಚಾಯತ್ ರಸ್ತೆಯು ಗೋಳ್ತಮಜಲು ಮತ್ತು ಮಾಣಿ ಜಿಲ್ಲಾ ಪಂಚಾಯತ್, ಮಾಣಿ, ಬಾಳ್ತಿಲ, ಮತ್ತು ಕಡೇಶ್ವಾಲ್ಯ ತಾಲೂಕು ಪಂಚಾಯತ್ ಹಾಗೂ ಪೆರಾಜೆ, ಬರಿಮಾರು, ಕಡೇಶ್ವಾಲ್ಯ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಗೊಳಪಟ್ಟಿದೆ. ಕಾಗೆಕಾನ ಪರಿಸರದ ವಿದ್ಯಾರ್ಥಿಗಳು ವಿದ್ಯಾರ್ಜನೆಗಾಗಿ 2 ಕಿ.ಮೀ. ದೂರದ ಸೇರ ಎಂಬಲ್ಲಿನ ಸರಕಾರಿ ಶಾಲೆಗೆ ಹೋಗಬೇಕಾಗಿದೆ. ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾಭ್ಯಾಸಕ್ಕಾಗಿ 5 ಕಿ.ಮೀ. ದೂರದ ರಾ.ಹೆ. 75ರ ಬುಡೋಳಿ ಜಂಕ್ಷನ್‌ಗೆ ಬಂದು ಅಲ್ಲಿಂದ ಮಾಣಿ, ಕಲ್ಲಡ್ಕ, ಬಂಟ್ವಾಳ, ಪೆರ್ನೆ, ಉಪ್ಪಿನಂಗಡಿ, ಪುತ್ತೂರು ಮೊದಲಾದ ಕಡೆಗಳಿಗೆ ತೆರಳಬೇಕಾಗಿದೆ. ಪ್ರತಿದಿನ ಕೆಲಸ-ಕಾರ್ಯಗಳಿಗೆ ತೆರಳುವವರ ಸ್ಥಿತಿ ಇದೇ ಆಗಿದೆ.

5 ಕಿ.ಮೀ. ದೂರದ ಈ ರಸ್ತೆಯು 14 ವರ್ಷಗಳ ಹಿಂದೆ ಡಾಮರೀಕರಣಗೊಂಡಿದ್ದು, ಬಳಿಕ ಇದುವರೆಗೂ ಯಾವುದೇ ರೀತಿಯ ದುರಸ್ತಿಯನ್ನು ಕಂಡಿಲ್ಲ. ವಾಹನ ಸಂಚಾರ ಇಲ್ಲಿ ತ್ರಾಸದಾಯಕವಲ್ಲದೆ ಜನತೆ ನಡೆದಾಡಲು ಕೂಡಾ ಅಸಾಧ್ಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಮಳೆಗಾಲದಲ್ಲಂತೂ ಈ ರಸ್ತೆಯಲ್ಲಿ ನಡೆದಾಡುವುದೂ ಒಂದು ಸಾಹಸವೇ ಸರಿ ಎಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಮತಯಾಚನೆಗೆ ಈ ದಾರಿಯಲ್ಲಿ ಬರುವ ರಾಜಕಾರಣಿಗಳು ಪ್ರತೀ ಬಾರಿಯೂ ಭರವಸೆ ನೀಡಿ ತೆರಳುತ್ತಾರೆಯೇ ವಿನಃ ಈ ರಸ್ತೆ ದುರಸ್ತಿ ಕಾರ್ಯದಲ್ಲಿ ಇವರುಗಳು ನೀಡಿರುವ ಕೊಡುಗೆ ಶೂನ್ಯ ಎನ್ನುತ್ತಿರುವ ಇಲ್ಲಿನ ಜನತೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಬೃಹತ್ ಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ ಎಂದು ಎಚ್ಚರಿಸಿದ್ದಾರೆ.

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ, ಸಚಿವ ಬಿ. ರಮಾನಾಥ ರೈ, ಎರಡು ಜಿಲ್ಲಾ ಪಂಚಾಯತ್ ಸದಸ್ಯರು, ಮೂವರು ತಾಲೂಕು ಪಂಚಾಯತ್ ಸದಸ್ಯರು ಹಾಗೂ 3 ಮಂದಿ ಗ್ರಾಮ ಪಂಚಾಯತ್‌ನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಇನ್ನಾದರೂ ಈ ರಸ್ತೆಯ ಬಗ್ಗೆ ಗಮನ ಹರಿಸಿ ಕಾಯಕಲ್ಪ ಒದಗಿಸಬೇಕು ಎಂದು ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News