ಕಾಸರಗೋಡು: ರಿವಾಲ್ವರ್ ತೋರಿಸಿ ಉದ್ಯಮಿಯಿಂದ ಕೋಟ್ಯಂತರ ರೂ. ದರೋಡೆ
ಕಾಸರಗೋಡು, ಆ.21: ರಿವಾಲ್ವರ್ ತೋರಿಸಿ ಸ್ವರ್ಣೋದ್ಯಮಿಯಿಂದ 2.70 ಕೋಟಿ ರೂ. ದರೋಡೆ ನಡೆಸಿದ ಘಟನೆಯೊಂದು ಕಾಸರಗೋಡಿನಲ್ಲಿ ನಡೆದಿದ್ದು, ತಡವಾಗಿ ಕೃತ್ಯ ಬೆಳಕಿಗೆ ಬಂದಿದೆ.
ಆ.7ರಂದು ನಗರ ಹೊರ ವಲಯದ ಚೆರ್ಕಳದಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಆ.20ರಂದು ಕಾಸರಗೋಡು ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆಗೆ ಸಂಬಂಧಪಟ್ಟಂತೆ ಗಣೇಶ್ ಎಂಬವರು ನೀಡಿದ ದೂರಿನಂತೆ ಐವರ ವಿರುದ್ಧ ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉದ್ಯಮಿ ಗಣೇಶ್ ಮತ್ತು ಗಿರೀಶ್ ಎಂಬವರು ಪುಣೆಯಿಂದ ತಲಶ್ಶೇರಿಗೆ ಇನ್ನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಆ.6ರಂದು ಇವರ ಕಾರು ಚೆರ್ಕಳದ ಇಳಿಜಾರು ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಹಿಂದಿನಿಂದ ಮತ್ತೊಂದು ಕಾರು ಢಿಕ್ಕಿ ಹೊಡೆದಿತ್ತು. ಕಾರಿನಿಂದ ಇಳಿದ ಐವರು ರಿವಾಲ್ವರ್ ತೋರಿಸಿ ನಗದು ದರೋಡೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.ದರೋಡೆ ಗೈದ ಹಣ ಮರಳಿ ಲಭಿಸಬಹುದು ಎಂಬ ನಿರೀಕ್ಷೆಯಿಂದ ದೂರು ನೀಡಲು ವಿಳಂಬವಾಗಿರುವುದಾಗಿ ದೂರು ಸಲ್ಲಿಸುವ ವೇಳೆ ಗಣೇಶ್ ತಿಳಿಸಿದ್ದಾರೆ. ತಲಶ್ಯೇರಿ ನಿವಾಸಿ ಸ್ವರ್ಣೋದ್ಯಮಿ ಓರ್ವರಿಗೆ ಒಪ್ಪಿಸಲು ಈ ಹಣವನ್ನು ಕೊಂಡೊಯ್ಯುತ್ತಿದ್ದುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ನಡುವೆ ಸಲ್ಲಿಕೆಯಾದ ದೂರಿನ ಬಗ್ಗೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಭಾರೀ ಮೊತ್ತದ ಹಣ ದರೋಡೆಗೊಳಗಾದರೂ ಎರಡು ವಾರ ದೂರು ನೀಡದೆ ಮುಚ್ಚಿಟ್ಟ ಬಗ್ಗೆ ಅನುಮಾನ ಮೂಡಿದ್ದು, ಇವರ ಬಳಿ ಇದ್ದುದು ಹವಾಲಾ ಹಣ ಆಗಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಹಣ ಕಳೆದುಕೊಂಡ ಗಣೇಶ್ ಮತ್ತು ಗಿರೀಶ್‌ರ ಮೊಬೈಲ್ ಸಂಖ್ಯೆಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಈ ಬಗ್ಗೆ ಘಟನೆಯ ಸತ್ಯಾಸತ್ಯತೆ ಬೆಳಕಿಗೆ ಬರಲಿದೆ ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇವರ ಚಲನವಲನಗಳ ಬಗ್ಗೆ ಅರಿತವರೇ ಅಥವಾ ಪೂರ್ವಯೋಜಿತವಾಗಿ ಈ ಕೃತ್ಯ ನಡೆಸಿರುವುದಾಗಿ ಶಂಕಿಸಲಾಗಿದೆ. ಕಾರು ಚಾಲಕನ ಬಗ್ಗೆಯೂ ಪೊಲೀಸರಿಗೆ ಸಂಶಯಗಳು ಮೂಡಿದ್ದು, ದೂರಿನಲ್ಲಿ ಕೂಡಾ ಕೆಲ ಗೊಂದಲಗಳಿವೆ ಎಂದು ವಿದ್ಯಾನಗರ ಠಾಣಾ ಪೊಲೀಸರು ತಿಳಿಸಿದ್ದಾರೆ.