ಮಡಗಾಂವ್-ಮಂಗಳೂರು ರೈಲಿನ ಬೋಗಿಯಲ್ಲಿ ಆತಂಕಕ್ಕೆ ಕಾರಣವಾದ ಬರಹಗಳು
ಮಂಗಳೂರು, ಆ. 21: ಮಡಗಾಂವ್-ಮಂಗಳೂರು ನಡುವೆ ಸಂಚರಿಸುವ ರೈಲಿನ ಬೋಗಿಯಲ್ಲಿ ಶನಿವಾರ ಕೆಲವು ಬರಹಗಳು ಕಂಡುಬಂದಿದ್ದು ಮಂಗಳೂರು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶನಿವಾರ ಅಪರಾಹ್ನ 2:45ಕ್ಕೆ ಹೊರಡುವ ಮಡಗಾಂವ್-ಗೋವಾ ಎಕ್ಸ್‌ಪ್ರೆಸ್ ರೈಲಿನ ಬೋಗಿಯಲ್ಲಿ ‘ಹೂನ್ಸ್’ ಎಂದು ಆಂಗ್ಲ ಭಾಷೆಯಲ್ಲಿ ಬಹುವರ್ಣದಲ್ಲಿ ಬರೆದಿರುವುದು ಕಂಡುಬಂದಿದೆ. ಪ್ರಯಾಣಿಕರು ಮೊದಲು ಗಮನಿಸಿ ರೈಲ್ವೆ ಅಧಿಕಾರಿಗಳಿಗೆ ತಿಳಿಸಿದ್ದರು. ಮಂಗಳೂರು ಸೆಂಟ್ರಲ್ ರೈಲ್ವೆ ಕ್ಯಾರಿಯರ್ಸ್ ಮತ್ತು ವ್ಯಾಗನ್ ವಿಭಾಗದ ಅಧಿಕಾರಿಗಳು ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಪ್ರೇ ಪೇಯಿಂಟ್ ಬಳಸಿ ಈ ಬರಹವನ್ನು ಬರೆಯಲಾಗಿದ್ದು ಬರಹದ ಹಿಂದಿನ ಉದ್ದೇಶ ತಿಳಿದುಬಂದಿಲ್ಲ. ಗೋವಾದಲ್ಲಿ ರಾತ್ರಿ ರೈಲು ತಂಗುತ್ತಿದ್ದು, ಈ ವೇಳೆ ಸ್ಪ್ರೇ ಪೇಯಿಂಟ್ ಬಳಸಿ ಬರೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಹೂನ್ಸ್, ಬಿಜಿಜಿಎಸ್, ಆರ್‌ಎಚ್‌ಎಸ್, ಡಿಕೆಎಸ್ ಮುಂತಾದ ನಿಗೂಢ ಅರ್ಥದ ಆಂಗ್ಲ ಅಕ್ಷರಗಳನ್ನು ಬೋಗಿಗಳಲ್ಲಿ ಬರೆಯಲಾಗಿದೆ. ಇದರ ಅರ್ಥ ಏನೆಂಬುದು ತಿಳಿದುಬಂದಿಲ್ಲ.