ಮಂಜನಾಡಿಯ ಯುವಕನ ಅಪಹರಣ: ಒಂದೂವರೆ ಕೋಟಿ ರೂ.ಗೆ ಬೇಡಿಕೆ

Update: 2016-08-21 17:26 GMT

ಮಂಗಳೂರು, ಆ. 21: ಕೆಲವು ವರ್ಷಗಳ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ವರ್ಷದ ಹಿಂದೆ ಊರಿಗೆ ಮರಳಿದ್ದ ಯುವಕನೋರ್ವನನ್ನು ಗುಂಪೊಂದು ಅಪಹರಿಸಿರುವ ಬಗ್ಗೆ ಬೆಳಕಿಗೆ ಬಂದಿದ್ದು, ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಣದ ವ್ಯವಹಾರವೇ ಯುವಕನ ಅಪಹರಣಕ್ಕೆ ಕಾರಣ ಎಂದು ಆರೋಪಿಸಲಾಗಿದೆ.

ಮಂಜನಾಡಿ ಸಮೀಪದ ಕಲ್ಕಟ್ಟ ನಿವಾಸಿ ದಿವಂಗತ ಅಬ್ದುಲ್ ಗಫೂರ್ ಎಂಬವರ ಪುತ್ರ ಮುಹಮ್ಮದ್ ಆರಿಫ್ (29) ಎಂಬವರೇ ಅಪಹರಣಕ್ಕೊಳಗಾದವರು.

ಸುಮಾರು ಐದು ವರ್ಷಗಳ ಕಾಲ ದುಬೈಯಲ್ಲಿ ಉದ್ಯೋಗದಲ್ಲಿದ್ದ ವರ್ಷದ ಹಿಂದೆಯಷ್ಟೇ ಊರಿಗೆ ಮರಳಿದ್ದರು. ಊರಿನಲ್ಲಿ ನಾಲ್ಕೈದು ತಿಂಗಳಿನಿಂದ ಮೀನಿನ ವ್ಯಾಪಾರವನ್ನು ಪ್ರಾರಂಭಿಸಿದ್ದರು. ಆರಿಫ್ ಎಂದಿನಂತೆ ಆಗಸ್ಟ್ 11ರಂದು ಮುಂಜಾನೆ 4:30ಕ್ಕೆ ತನ್ನ ಮನೆಯಿಂದ ದಕ್ಕೆಯ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಅವರ ಮನೆ ಸಮೀಪವೇ ಅವರನ್ನು ಅಪಹರಿಸಲಾಗಿದೆ ಎಂದು ಅವರ ಹತ್ತಿರದ ಸಂಬಂಧಿ ಅಬ್ದುರ್ರಹ್ಮಾನ್ ಎಂಬವರು ಆರೋಪ ಮಾಡಿದ್ದಾರೆ.

ಅಂದು ಬೆಳಗ್ಗೆ ಆರಿಫ್ ದಕ್ಕೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅವರ ತಾಯಿ ಮನೆಯ ಸಮೀಪ ನಿಂತಿದ್ದ ಕಪ್ಪು ಬಣ್ಣದ ಕಾರೊಂದನ್ನು ಕಂಡಿದ್ದು, ಆರಿಫ್ ಮನೆಯಿಂದ ತುಸು ದೂರ ನಡೆದುಕೊಂಡು ಹೋಗುತ್ತಿದ್ದಾಗ ನಿಂತಿದ್ದ ಕಾರು ಅತೀ ವೇಗದಲ್ಲಿ ಆರಿಫ್ ಹೋಗಿದ್ದ ಕಡೆಗೆ ಸಂಚರಿಸಿದೆ. ಈ ಕಾರಿನಲ್ಲಿದ್ದವರೇ ಆರಿಫ್‌ನನ್ನು ಅಪಹರಿಸಬೇಕೆಂದು ರಹ್ಮಾನ್ ಆರೋಪಿಸಿದ್ದಾರೆ.

ಅಪಹರಣದ ದಿನದಿಂದ ವಿದೇಶದಿಂದ ಕರೆ ಬರುತ್ತಿದ್ದು, ಒಂದೂವರೆ ಕೋಟಿ ರೂ. ಬೇಡಿಕೆ ಇಡುತ್ತಿದ್ದಾರೆ. ಕೊಡದಿದ್ದರೆ ಆರಿಫ್‌ನನ್ನು ಕೊಲ್ಲುವುದಾಗಿ ಬೆದರಿಕೆ ಒಡ್ಡುತ್ತಿದ್ದಾರೆ. ಶನಿವಾರ ಕೂಡಾ ವಿದೇಶದಿಂದ ಕರೆಯೊಂದು ಬಂದಿದ್ದು, ತಾನು ಇರಾನಿ ಎಂದು ಹೇಳಿಕೊಳ್ಳುವ ವ್ಯಕ್ತಿ ಹಣ ಕೊಟ್ಟರೆ ಆರಿಫ್‌ನನ್ನು ಬಿಡುವುದಾಗಿ ಬೆದರಿಕೆ ಹಾಕಿದ್ದಾನೆ. ರವಿವಾರವೂ ಫೋನ್ ಬಂದಿದ್ದು, ಆ ಫೋನ್‌ನಲ್ಲಿ ಆರಿಫ್ ಮಾತನಾಡಿ ‘‘ತನ್ನನ್ನು ನೀರಿನ ನಡುವೆ ನಿಲ್ಲಿಸಿ ಇವರು ಹೊಡೆಯುತ್ತಿದ್ದು, ಊಟ, ನೀರು ಕೂಡ ಕೊಡುತ್ತಿಲ್ಲ. ನಾಳೆ ಕೊಲ್ಲುವುದಾಗಿ ಹೇಳುತ್ತಿದ್ದಾರೆ’’ ಎಂದು ಹೇಳಿಕೊಂಡಿರುವುದಾಗಿ ರಹ್ಮಾನ್ ತಿಳಿಸಿದ್ದಾರೆ.

ತನಿಖೆ ಪ್ರಗತಿಯಲ್ಲಿದೆ: ಇನ್ಸ್‌ಪೆಕ್ಟರ್

ಆರಿಫ್ ಅಪಹರಣವಾಗಿರುವ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಕೊಣಾಜೆ ಠಾಣಾ ಇನ್ಸ್‌ಪೆಕ್ಟರ್ ಅಶೋಕ್ ತಿಳಿಸಿದ್ದಾರೆ.

ಪತ್ರಿಕೆಯೊಂದಿಗೆ ಮಾತನಾಡಿದ ಅವರು, ದೂರಿನಲ್ಲಿ ಆರೋಪಿಸಲಾಗಿರುವ ವ್ಯಕ್ತಿಗಳ ಹುಡುಕಾಟ ಪ್ರಾರಂಭಿಸಲಾಗಿದೆ. ಅಪಹರಣಕಾರರ ಬಗ್ಗೆ ದೂರುದಾರರು ನೀಡಿದ ಮಾಹಿತಿಯನ್ನು ಅನುಸರಿಸಿ ಅವರ ನಿವಾಸಕ್ಕೆ ದಾಳಿ ನಡೆಸಲಾಗಿದೆ. ಆರೋಪಿಗಳಲ್ಲಿ ಓರ್ವ ಕೇರಳದ ಬೇಕಲದವನೆಂದು ಹೇಳಲಾಗಿದ್ದು, ಈ ಬಗ್ಗೆ ಬೇಕಲ ಪೊಲೀಸರ ಸಹಕಾರದೊಂದಿಗೆ ಆತನ ನಿವಾಸಕ್ಕೂ ದಾಳಿ ನಡೆಸಲಾಗಿದ್ದು, ಆರೋಪಿಗಳು ತಮ್ಮ ನಿವಾಸಕ್ಕೆ ಬೀಗ ಜಡಿದಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಅಪಹರಣಕ್ಕೆ ಹಣಕಾಸಿನ ವ್ಯವಹಾರವೇ ಕಾರಣ ಎಂದು ಹೇಳಲಾಗಿದ್ದು, ಆರಿಫ್ ಆರೋಪಿಗಳಿಗೆ ಹಣವನ್ನು ಬಾಕಿ ಇರಿಸಿದ್ದು, ಇದರಿಂದಲೇ ಆತನ ಅಪಹರಣವಾಗಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ವೃತ್ತ ನಿರೀಕ್ಷಕ ಅಶೋಕ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News