ಬಂಟ್ವಾಳ ತಾಪಂನಿಂದ ದೇವರಾಜ ಅರಸು ಜನ್ಮ ದಿನಾಚರಣೆ
ಬಂಟ್ವಾಳ, ಆ.22: ಕರ್ನಾಟಕದಲ್ಲಿ ಹಾಸ್ಟೆಲ್ ಪರಿಕಲ್ಪನೆಯನ್ನು ಹುಟ್ಟುಹಾಕಿ ಬಡಹಿಂದುಳಿದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಮೇಲ್ಪಂಕ್ತಿ ಹಾಕಿದ ಓರ್ವ ಮೇಧಾವಿ ಮುಖ್ಯಮಂತ್ರಿಯಾಗಿ ಗುರುತಿಸಿಕೊಂಡವರು ದಿ. ಡಿ.ದೇವರಾಜ ಅರಸು ಎಂದು ಬಿ.ಮೂಡ ಸರಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಅಬ್ದುರ್ರಝಾಕ್ ಅನಂತಾಡಿ ಕೊಂಡಾಡಿದರು. ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆೆ ಹಾಗೂ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಬಿ.ಸಿ.ರೋಡ್‌ನ ಎಸ್‌ಜೆಎಸ್‌ವೈ ಸಭಾಂಗಣದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸುರವರ 101ನೆ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ತಾಪಂ ಅಧ್ಯಕ್ಷ ಚಂದ್ರಶೇಖರ ಕರ್ಕೇರ ಉದ್ಘಾಟಿಸಿದರು. ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿಯ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಜಿಪಂ ಸದಸ್ಯರಾದ ಎಂ.ಎಸ್.ಮುಹಮ್ಮದ್, ರವೀಂದ್ರ ಕಂಬಳಿ, ಮಂಜುಳಾ ಮಾವೆ, ಕಮಲಾಕ್ಷಿ ಕೆ. ಪೂಜಾರಿ, ತಾಪಂ ಸದಸ್ಯರಾದ ಸಂಜೀವ ಪೂಜಾರಿ, ಗಣೇಶ್ ಸುವರ್ಣ, ಯಶವಂತ ಪೂಜಾರಿ, ಪದ್ಮಶ್ರೀ, ತಹಶೀಲ್ದಾರ್ ಪುರಂದರ ಹೆಗಡೆ ಮುಂತಾದವರು ಉಪಸ್ಥಿತರಿದ್ದರು. ಇದೇ ವೇಳೆ ಕಾರ್ಯಕ್ರಮದ ಪ್ರಯುಕ್ತ ಹಿಂದುಳಿದ ವರ್ಗದ ವಸತಿ ನಿಲಯದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಯ ಜಯಣ್ಣ ಸ್ವಾಗತಿಸಿದರು. ಶಿವಣ್ಣ ಪ್ರಸ್ತಾವನಗೈದರು. ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.