×
Ad

ಭಟ್ಕಳ: ಪುರಸಭೆ ಅಂಗಡಿ ಮಳಿಗೆ ಹರಾಜು ಪ್ರಕಿಯೆಯಲ್ಲಿ ದಲಿತರಿಗೆ ಅನ್ಯಾಯ - ದಲಿತ ಮೀಸಲಾತಿ ರಕ್ಷಣಾ ವೇದಿಕೆ ಆರೋಪ

Update: 2016-08-22 17:35 IST

 ಭಟ್ಕಳ,ಆ.22: ಪುರಸಭೆಯ 109 ಅಂಗಡಿ ಮಳಿಗೆಗಳ ಪೈಕಿ ಬಹಿರಂಗ ಹರಾಜು ಮೂಲಕ 39 ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸಿದ್ದು ದಲಿತರಿಗೆ ಅನ್ಯಾಯವಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಹಾಗೂ ದಲಿತ ಮೀಸಲಾತಿ ರಕ್ಷಣಾ ವೇದಿಕೆ ಆರೋಪಿಸಿದೆ. ಇಲ್ಲಿನ ದಂಡಿನ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದಲಿತ ಸಂಘಟನೆಯ ಉಪಾಧ್ಯಕ್ಷ ರವೀಂದ್ರ ಸುಬ್ಬಾ ಹರಾಜು ಪ್ರಕ್ರಿಯೆಯಲ್ಲಿ 39 ಅಂಗಡಿಗಳಲ್ಲಿ ಕೇವಲ 2 ಅಂಗಡಿಗಳು ದಲಿತರಿಗೆ ದೊರೆತಿದ್ದು ಈ ಪ್ರಕ್ರಿಯೆಯಿಂದ ಅನ್ಯಾಯವಾಗಿದೆ. ಸರ್ಕಾರದ ಆದೇಶದ ಪ್ರಕಾರ ಒಟ್ಟು ಶೇ. 18ರಷ್ಟು ಅಂಗಡಿಗಳನ್ನು ದಲಿತರಿಗೆ ನೀಡಬೇಕಾಗಿದೆ, ಭಟ್ಕಳ ಪುರಸಭೆಯು ದಲಿತರನ್ನು ಕಡೆಗಣಿಸಿದೆ. ಆದೇಶದಂತೆ ಮೀಸಲಿಡಬೇಕಾದ 18 ಅಂಗಡಿಗಳಲ್ಲಿ 11 ಅಂಗಡಿಗಳನ್ನು ಮಾತ್ರ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದು, ಅವುಗಳನ್ನು ಕೂಡಾ ಮುಖ್ಯ ರಸ್ತೆಯಲ್ಲಿ ನೀಡದೇ ಯಾರೂ ತೆಗೆದುಕೊಳ್ಳದ ಮೂಲೆಯಲ್ಲಿ ನೀಡಲಾಗಿದೆ. ಎಂದು ಹೇಳಿದ ಅವರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ನೀಡಬೇಕಾದ ಸಾವಿರಕ್ಕೂ ಅಧಿಕ ಮೊತ್ತದ ಠೇವಣಿಯನ್ನು ನಮ್ಮವರ ಹತ್ತಿರ ನೀಡಲು ಅಸಾಧ್ಯವಾಗಿದ್ದು ಹರಾಜಿನಲ್ಲಿ ನಮಗೆ ನೀಡಬೇಕಾದ ಮೀಸಲಾತಿಯಲ್ಲಿ ಅನ್ಯಾಯವಾದ ಕಾರಣ ಪರಿಶಿಷ್ಠ ಕಾಯ್ದೆ ದೌರ್ಜನ್ಯದಡಿಯಲ್ಲಿ ದೂರನ್ನು ಸಲ್ಲಿಸಲು ತಯಾರಿ ಮಾಡಲಾಗಿದೆ. ಅದೇ ರೀತಿ ಜಿಲ್ಲಾ ನ್ಯಾಯಾಲದಲ್ಲಿ ಈಗಾಗಲೇ ನಡೆದ ಹರಾಜಿನ ಪ್ರಕ್ರಿಯೆಗೆ ತಡೆಯನ್ನು ಕೋರಲು ನಿರ್ಧರಿಸಲಾಗಿದೆ ಎಂದರು.

  ಈ ಸಂದರ್ಭದಲ್ಲಿ ದಲಿತರ ಸಂಘಟನೆಯ ಜಿಲ್ಲಾ ಸಂಚಾಲಕ ಕಿರಣ ಶಿರೂರು ಮಾತನಾಡಿ ಪುರಸಭೆಯ ಹರಾಜಿನ ಪ್ರಕ್ರಿಯೆಯಿಂದ ಈಗಾಗಲೇ ಅಂಗಡಿಗಳನ್ನು ನಡೆಸುತ್ತಿದ್ದ ಪರಿಶಿಷ್ಠ ಜಾತಿ/ಪಂಗಡದವರಿಗೆ ಜೀವನೋಪಾಯಕ್ಕೆ ಸಮಸ್ಯೆಯಾಗುತ್ತಿದೆ. ಏಕಾಏಕಿ ನಮ್ಮನ್ನು ಹೊರಹಾಕುವುದರಿಂದ ನಾವು ಬದುಕುವುದು ಕಷ್ಟವಾಗುತ್ತಿದೆ. ಈ ಬಗ್ಗೆ ಶಾಸಕ ಮಂಕಾಳ ಎಸ್. ವೈದ್ಯರವರು ಕೇವಲ ಮೋಗೆರ ಸಮಾಜದ ಅಭಿವೃದ್ಧಿಗೆ ಸಹಾಯ ಮಾಡುತ್ತಿದ್ದು, ದಲಿತರ ಕ್ಷೇಮಾಭಿವೃದ್ಧಿಗೆ ಯಾವುದೇ ಕಾರ್ಯ ಮಾಡುತ್ತಿಲ್ಲ.  ಈ ಬಗ್ಗೆ ಶಾಸಕರು ಸಹ ನಮ್ಮ ಪರ ಕಾರ್ಯ ಮಾಡಬೇಕೆಂದು ಮನವಿ ಮಾಡಿದರು.

ಈ ಸಂಧರ್ಭದಲ್ಲಿ ನಗರ ದಲಿತ ಸಂಘರ್ಷ ಸಮಿತಿಯ ಹಾಗು ದಲಿತ ಮೀಸಲಾತಿ ರಕ್ಷಣಾ ವೇದಿಕೆಯ ಪದಾದಿಕಾರಿಗಳಾದ ಲೋಹಿತ ಶಿರೂರಕರ್, ವಿರೇಂದ್ರ ಪಾವಸ್ಕರ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News