‘ಗೋ ಸಂರಕ್ಷಣೆ’ ಕೇಂದ್ರದ ಇಬ್ಬಗೆ ನೀತಿ: ಮಲ್ಲಿಕಾರ್ಜುನ ಖರ್ಗೆ

Update: 2016-08-22 14:13 GMT

ಕಲಬುರಗಿ, ಆ.22: ಗೋ ಸಂರಕ್ಷಣೆಯ ವಿಚಾರದಲ್ಲಿ ಬಿಜೆಪಿ ಹಾಗೂ ಕೇಂದ್ರ ಸರಕಾರ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ಗೋ ಸಾಗಾಣಿಕೆ ಮಾಡುತ್ತಿದ್ದ ಬಿಜೆಪಿ ಕಾರ್ಯಕರ್ತನ ಹತ್ಯೆ ಕುರಿತು ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಕಡೆ ಗೋವುಗಳನ್ನು ರಕ್ಷಣೆ ಮಾಡುತ್ತೇವೆ ಅಂತಾರೆ, ಮತ್ತೊಂದೆಡೆ ಅವರೇ ಗೋವುಗಳನ್ನು ಸಾಗಾಣಿಕೆ ಮಾಡುತ್ತಾರೆ ಎಂದರು.

ಇದರ ಜೊತೆಗೆ, ಗೋವುಗಳನ್ನು ಸಾಗಾಣಿಕೆ ಮಾಡುವವರನ್ನು ಹಿಡಿದು ಕೊಲೆ ಮಾಡುವುದು ಅವರೇ. ಇದು ಗೋವಿಗೆ ಸಂಬಂಧಿಸಿದ ಬಿಜೆಪಿಯ ಇಬ್ಬಗೆ ನೀತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಕಿಡಿಗಾರಿದರು.

 ಭಾರತೀಯ ಸೇನೆ ವಿರುದ್ಧ ಘೋಷಣೆಗಳು ಕೂಗಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಅಮ್ನೆಸ್ಟಿ ಸಂಸ್ಥೆಗೆ ಯಾರೂ ಕ್ಲೀನ್‌ಚಿಟ್ ನೀಡಿಲ್ಲ. ಗೃಹ ಸಚಿವಾಲಯವು ಉನ್ನತಮಟ್ಟದ ತನಿಖೆ ನಡೆಸುತ್ತಿದೆ. ವರದಿ ಬಂದ ನಂತರ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ ಎಂದು ಅವರು ಹೇಳಿದರು.

ಸಣ್ಣ ಸಣ್ಣ ವಿಷಯಗಳಿಗೆ ರಾಜಕೀಯ ಮಾಡಬಾರದು. ಬಿಜೆಪಿಯವರು ರಾಜಕೀಯದ ಮೂಲಕ ಜನರಲ್ಲಿ ಒಡಕು ಮೂಡಿಸಲು ಪ್ರಯತ್ನ ಪಡುತ್ತಿದ್ದಾರೆ. ದೇಶದ್ರೋಹಿಗಳಿಗೆ ಕಾಂಗ್ರೆಸ್ ಪಕ್ಷ ಎಂದಿಗೂ ಬೆಂಬಲ ನೀಡುವುದಿಲ್ಲ. ಬಿಜೆಪಿಯವರು ನಿರಾಧಾರವಾದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News