ಬಂಟ್ವಾಳ: ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಅನುಷ್ಠಾನಗೊಂಡ ಯೋಜನೆಗಳ ಬಗ್ಗೆ ಅಧ್ಯಯನ ನಡೆಸಲು ಅಧಿಕಾರಿಗಳ ಬೇಟಿ
ಬಂಟ್ವಾಳ, ಆ. 22: ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನಗೊಂಡ ವಿನೂತನ ಹಾಗೂ ಯಶಸ್ವಿ ಯೋಜನೆಗಳ ಬಗ್ಗೆ ಅಧ್ಯಯನ ನಡೆಸಲು ಬಿಹಾರ, ಅಸ್ಸಾಂ, ಉತ್ತರ ಪ್ರದೇಶ, ಜಾರ್ಖಾಂಡ್ ಮತ್ತು ದೆಹಲಿಯಿಂದ ಆಗಮಿಸಿದ ಅಧಿಕಾರಿಗಳ ತಂಡ ಸೋಮವಾರ ತಾಲೂಕಿನ ಸಂಗಬೆಟ್ಟು ಹಾಗೂ ಗೋಳ್ತಮಜಲು ಗ್ರಾಮಗಳಿಗೆ ಸೋಮವಾರ ಭೇಟಿ ನೀಡಿ ಅಧ್ಯಯನ ನಡೆಸಿತು.
ಸಂಗಬೆಟ್ಟು ಗ್ರಾಮದ ಸಿದ್ದಕಟ್ಟೆಯಲ್ಲಿ ನಿರ್ಮಿಸಲಾದ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದ ತಂಡ ಅಂಗಡಿ, ಹೊಟೇಲು, ವಾಣಿಜ್ಯ ಸಂಕೀರ್ಣಗಳಿಂದ ಸಂಗ್ರಹಿಸಿದ ಘನತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವ ಬಗ್ಗೆ ಮಾಹಿತಿ ಪಡೆದುಕೊಂಡಿತು. ಬಳಿಕ ಸ್ಥಳೀಯ ಬಾಕಿಮಾರು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪೈಪ್ ಕಾಂಪೋಸ್ಟ್ ಹಾಗೂ ಶೌಚಾಲಯ ಸ್ವಚ್ಛತೆಯ ಬಗ್ಗೆ ಮಾಹಿತಿ ಪಡೆಯಿತು. ಇದೇ ಸಂದರ್ಭದಲ್ಲಿ ಸ್ಥಳೀಯ ಮನೆಯೊಂದಕ್ಕೆ ಅಳವಡಿಸಿದ್ದ ನೀರಿನ ಮೀಟರ್ ಬಗ್ಗೆ ತಿಳಿಸಿಕೊಡಲಾಯಿತು. ಬಳಿಕ ತಂಡ ಗೋಳ್ತಮಜಲು ಪಂಚಾಯತ್‌ಗೆ ತೆರಳಿ ದ್ರವ ತ್ಯಾಜ್ಯ ಘಟಕ ಹಾಗೂ ಸ್ವಚ್ಛತೆ ಅನುಷ್ಠಾನದ ಬಗ್ಗೆ ಮಾಹಿತಿ ಪಡೆಯಿತು.
ಬಳಿಕ ಸಿದ್ದಕಟ್ಟೆ ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ತಂಡ ಅಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಅಳವಡಿಸಲಾಗಿದ್ದ ನ್ಯಾಪಕಿನ್ ಬರ್ನ್ ಯಂತ್ರದ ಬಗ್ಗೆ ಮಾಹಿತಿ ಪಡೆಯಿತು. ಬಳಿಕ ಸಂಗಬೆಟ್ಟು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಈ ಎಲ್ಲ ವಿಚಾರಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿತು. ತಾ.ಪಂ. ಸದಸ್ಯ ಪ್ರಭಾಕರ ಪ್ರಭು, ಪಂಚಾಯತ್ ಪಿಡಿಒ ಸಿಲ್ವಿಯಾ ಫೆರ್ನಾಂಡೀಸ್ ತಂಡಕ್ಕೆ ಪೂರಕ ಮಾಹಿತಿ ನೀಡಿದರು.
ತಂಡದಲ್ಲಿ ವಿವಿಧ ರಾಜ್ಯದ ಅಧಿಕಾರಿಗಳಾದ ರಾಘವ ನೇಟಿ, ರಘುಕುಮಾರ್ ಎಂ.ಎಸ್., ಎಸ್.ಸಿ.ಶರ್ಮಾ, ಡಾ. ಏಕ್ತ ರಾಯ್, ಪಿ.ಕೆ.ಸಿಂಗ್, ಹೇಮಾಂತ್ ಕುಮಾರ್ ಮಿಶ್ರ, ಮಧುಕರ್ ಗುಪ್ತ, ಶಾಹೀದ್ ಅಹ್ಮದ್ ಲಸ್ಕಾರ್, ರಾಮಯ ಜ್ಯೋತಿ ಶರ್ಮ, ರಿತೇಶ್ ಕುಮಾರ್ ಪಾಂಡೆ, ಆರ್.ಪಿ.ಮಿಶ್ರಾ ಇದ್ದರು.
ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಯೋಗೀಶ್ ಎಚ್.ಆರ್., ತಾಪಂ ಕಾರ್ಯನಿರ್ವಾಹಣಾಧಿಕಾರಿ ಸಿಪ್ರಿಯಾನ್ ಮಿರಾಂಡ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಸಹಾಯಕ ಎಂಜಿನಿಯರ್ ಗಿರೀಸ್ ಕೆ.ಪಿ., ಪಂಚಾಯತ್‌ರಾಜ್ ಎಂಜಿನಿಯರ್ ಜಗದೀಶ ನಿಂಬಳ್ಕಾರ್, ಸಂಗಬೆಟ್ಟು ಗ್ರಾಪಂ ಅಧ್ಯಕ್ಷೆ ಗುಲಾಬಿ ಶೆಟ್ಟಿ, ಉಪಾಧ್ಯಕ್ಷ ಸತೀಶ ಪೂಜಾರಿ, ಪಿಡಿಒ ಸಿಲ್ವಿಯಾ ಫೆರ್ನಾಂಡೀಸ್, ಕುಕ್ಕಿಪಾಡಿ ಗ್ರಾಪಂ ಅಧ್ಯಕ್ಷ ದಿನೇಶ್ ಸುಂದರ ಶಾಂತಿ, ಸಂಗಬೆಟ್ಟು ಪಂ.ಸದಸ್ಯರಾದ ಮಯ್ಯದಿ, ನಳಿನಿ, ಶಾರದ, ಸಿದ್ದಕಟ್ಟೆ ಸರಕಾರಿ ಪ್ರೌಢಶಾಲೆಯ ಉಪಪ್ರಾಂಶುಪಾಲ ರಮಾನಂದ ಹಾಜರಿದ್ದರು.
ಗೋಳ್ತಮಜಲು ಗ್ರಾಮದಲ್ಲಿ ಪ್ರತಿಭಟನೆಯ ಬಿಸಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಅನುಷ್ಠಾನಗೊಂಡಗೊಂಡ ಯೋಜನೆಗಳ ಬಗ್ಗೆ ಅಧ್ಯಯನ ನಡೆಸಲು ಗೋಳ್ತಮಜಲು ಗ್ರಾಮಕ್ಕೆ ಬಂದ ವಿವಿಧ ರಾಜ್ಯದ ಅಧಿಕಾರಿಗಳ ಎದುರೇ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ನಡೆದಿದ್ದು ಇದು ಇಲ್ಲಿನ ಅಧಿಕಾರಿಗಳನ್ನು ಇರಿಸುಮುರಿಸಿಗೊಳಪಡಿಸಿತು.
ಗ್ರಾಮದ ವಿಟ್ಲ ರಸ್ತೆಯಲ್ಲಿರುವ ದ್ರವ ತ್ಯಾಜ್ಯ ಘಟಕಕ್ಕೆ ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಘಟಕದ ಪಕ್ಕದಲ್ಲಿರುವ ಮನೆಯವರು ಜಿಲ್ಲೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ದ್ರವ ತ್ಯಾಜ್ಯ ಘಟಕವನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದ್ದು ಇಲ್ಲಿನ ಸ್ಥಳೀಯರು ವಿವಿಧ ರೋಗಕ್ಕೆ ತುತ್ತಾಗುತ್ತಿದ್ದಾರೆ. ಘಟಕ ನಿರ್ಮಾಣದ ಬಳಿಕ ಇಲ್ಲಿನ ಬಾವಿಯ ನೀರು ಕೂಡಾ ಕಲುಷಿತಗೊಂಡಿದ್ದು ಕುಡಿಯಲು ಅಯೋಗ್ಯವಾಗಿದೆ. ಈ ಬಗ್ಗೆ ಜಿಲ್ಲೆಯ ಹಾಗೂ ಸ್ಥಳೀಯ ಪಂಚಾಯತ್ ಅಧಿಕಾರಿಗಳಿಗೆ ದೂರು ನೀಡಿದರೂ ಅವರಿಂದ ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದು ಆರೋಪಿಸಿದ ಸ್ಥಳೀಯರು, ತ್ಯಾಜ್ಯಗಳಿಂದ ಘಟಕದ ಗಬ್ಬು ವಾಸನೆಗೆ ಮನೆಯಲ್ಲಿ ವಾಸ ಮಾಡದ ಸ್ಥಿತಿ ನಿರ್ಮಾಣವಾಗಿದೆ. ಇಂದು ಇಲ್ಲಿಗೆ ವಿವಿಧ ರಾಜ್ಯಗಳ ಅಧಿಕಾರಿಗಳು ಭೇಟಿ ನೀಡುವ ಹಿನ್ನೆಲೆಯಲ್ಲಿ ರವಿವಾರ ಘಟಕ್ಕೆ ದ್ರಾವಣಗಳನ್ನು ಸುರಿದು ಸ್ವಚ್ಛಗೊಳಿಸಲಾಗಿದೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಆಕ್ರೋಶಿತ ಸ್ಥಳೀಯರನ್ನು ಸಮಾಧಾನ ಪಡಿಸಲು ಜಿಲ್ಲೆಯ ಅಧಿಕಾರಿಗಳು ಪ್ರಯತ್ನಪಟ್ಟರಾದರೂ ಪ್ರಯೋಜನವಾಗಿಲ್ಲ. ಬಳಿಕ ಅಧಿಕಾರಿಗಳ ದಂಡಿನೊಂದಿಗೆ ಗ್ರಾಪಂಗೂ ತೆರಳಿದ ಸ್ಥಳೀಯರು ಘಟಕದಿಂದ ಉಂಟಾಗಿರುವ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಪಟ್ಟು ಹಿಡಿದರು.