×
Ad

ಸಪ್ತಭಾಷಾ ಸಂಶೋಧನಾ ಕೇಂದ್ರದ ಉದ್ಘಾಟನೆ ಭಾಗ್ಯ ಎಂದು ?

Update: 2016-08-22 20:15 IST

ಕಾಸರಗೋಡು,ಆ.22 : ಮಂಜೇಶ್ವರದಲ್ಲಿ  ಸಪ್ತಭಾಷಾ ಸಂಶೋಧನಾ ಕೇಂದ್ರ   ಕನಸಾಗಿ  ಉಳಿದುಕೊಂಡಿದೆ. ಕಟ್ಟಡ ಕಾಮಗಾರಿ ಪೂರ್ಣಗೊಂಡರೂ  ಇನ್ನೂ ಉದ್ಘಾಟನೆ ಭಾಗ್ಯ ಲಭಿಸಿಲ್ಲ.  ಕಾಮಗಾರಿ ಪೂರ್ಣಗೊಂಡು ತಿಂಗಳುಗಳು ಸಂದರೂ ಈ ಬಗ್ಗೆ  ಅಧಿಕಾರಿಗಳು  ಗಮನ ನೀಡಿಲ್ಲ.

ಕಣ್ಣೂರು ವಿಶ್ವವಿದ್ಯಾನಿಲಯ  ಅಧೀನತೆಯಲ್ಲಿ  ಮಂಜೇಶ್ವರ ಗೋವಿಂದ ಪೈ ಕಾಲೇಜು ಸಮೀಪ ಸಂಶೋಧನಾ ಕೇಂದ್ರ ಕ್ಕೆ ಕಟ್ಟಡ  ನಿರ್ಮಿಸಲಾಗಿದೆ.

ಕಳೆದ ಜನವರಿ  ಕೊನೆಗೆ ಕಾಮಗಾರಿ  ಪೂರ್ಣಗೊಂಡಿತ್ತು.  ಕಟ್ಟಡ ನಿರ್ಮಾಣಗೊಂಡರೂ ಇನ್ನೂ ಕಾರ್ಯಾರಂಭಗೊಳ್ಳದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ.

ಕನ್ನಡ , ಮಲಯಾಳ , ತುಳು , ಕೊಂಕಣಿ, ಉರ್ದು , ಬ್ಯಾರಿ , ಮರಾಠಿ  ಭಾಷೆಗಳ ಕೃತಿಗಳು , ತಾಳೆ ಗ್ರಂಥ , ಯಕ್ಷ ಗಾನ , ಇತರ ಕಲಾರೂಪ ,  ಪ್ರಮುಖ ಸಾಹಿತಿ, ಕವಿಗಳ  ಸಾಂಸ್ಕ್ರತಿಕ , ಸಾಹಿತ್ಯಿಕ  ಹಿನ್ನಲೆ ಸಾರುವ  ಸಪ್ತಭಾಷಾ ಸಂಶೋಧನಾ ಅಧ್ಯಯನ ಕೇಂದ್ರ  ವನ್ನು ಇಲ್ಲಿ ಆರಂಭಿಸುವ ನಿಟ್ಟಿನಲ್ಲಿ ಕೇಂದ್ರಕ್ಕೆ ಕಟ್ಟಡ ನಿರ್ಮಿಸಲಾಗಿದೆ.

ಕನ್ನಡ ಎಂ . ಫಿಲ್  ಕೋರ್ಸ್  ಆರಂಭಿಸಲು , ಏಳು ಭಾಷೆಗಳ ಸಾಹಿತ್ಯ , ಸಾಂಸ್ಕೃತಿಕ  ಕಾರ್ಯಕರ್ತರನ್ನು ಒಳಗೊಂಡ  ಚರ್ಚೆ , ಸಂವಾದ , ಗೋಷ್ಠಿಗಳನ್ನು  ಆಯೋಜಿಸಿಸುವ ಬಗ್ಗೆ  ಭರವಸೆ ನೀಡಲಾಗಿತ್ತು.

ಈಗ ಉನ್ನತ ಅಧ್ಯಯನಕ್ಕೆ ಮಂಗಳೂರು ಮತ್ತು ಇತರ ಕಡೆಗಳನ್ನು ಅವಲಂಬಿಸಬೇಕಿರುವುದರಿಂದ  ಮಂಜೇಶ್ವರದಲ್ಲಿ ಕೇಂದ್ರ ಆರಂಭಗೊಂಡಲ್ಲಿ   ಸಾಕಷ್ಟು ಅನುಕೂಲ ಲಭಿಸಲಿದೆ.

ಸುಮಾರು 1.42 ಕೋಟಿ ರೂ .  ವೆಚ್ಚದಲ್ಲಿ  ಕಟ್ಟಡ ನಿರ್ಮಿಸಲಾಗಿದೆ.  ಆದರೆ ಕಟ್ಟಡ ತಲೆ ಎತ್ತಿದರೂ ಕಾರ್ಯಾರಂಭಗೊಳ್ಳದಿರುವ  ಬಗ್ಗೆ ನಿರಾಶೆ ಮೂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News