ಗೋ ಸಂರಕ್ಷಣೆಯ ಹೆಸರಿನಲ್ಲಿ ಸಂಘ ಪರಿವಾರದಿಂದ ಗೂಂಡಾ ಪ್ರವರ್ತನೆ : ಕಡಬ ಬ್ಲಾಕ್ ಕಾಂಗ್ರೆಸ್ ಖಂಡನೆ

Update: 2016-08-22 14:54 GMT

ಕಡಬ, ಆ.22. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಕೊಲೆ-ಹಲ್ಲೆ-ದೌರ್ಜನ್ಯ ನಡೆಸಿ ಅಶಾಂತಿಯ ವಾತಾವರಣ ನಿರ್ಮಿಸುವ ನೀಚ ಕೃತ್ಯವನ್ನು ಕಡಬ ಬ್ಲಾಕ್ ಕಾಂಗ್ರೆಸ್ ಖಂಡಿಸುತ್ತದೆ ಎಂದು ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರ್ ಕೆರ್ಮಾಯಿ ತಿಳಿಸಿದರು. ಅವರು ಸೋಮವಾರದಂದು ಕಡಬದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಕಳೆದ ಹಲವಾರು ದಿನಗಳಿಂದ ದೇಶಾದ್ಯಂತ ಗೋರಕ್ಷಣೆಯ ಹೆಸರಿನಲ್ಲಿ ಸಂಘ ಪರಿವಾರದ ಫ್ಯಾಸಿಸ್ಟ್ ಶಕ್ತಿಗಳು ದಲಿತರ-ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗದವರ ಮೇಲೆ ನಿರಂತರವಾಗಿ ಅಮಾನುಷವಾದ ರೀತಿಯಲ್ಲಿ ದಾಳಿ ನಡೆಸುತ್ತಿದ್ದು, ಇದೀಗ ನಮ್ಮ ರಾಜ್ಯದಲ್ಲಿ ಗೋರಕ್ಷಣೆಯ ವಿಚಾರವನ್ನು ಮುಂದಿಟ್ಟುಕೊಂಡು ದಾಳಿ ನಡೆಸುತ್ತಿದೆ. ಈ ಮೂಲಕ ಭಯದ ವಾತಾವರಣವನ್ನು ನಿರ್ಮಿಸಿ ಮುಂದಿನ ಚುನಾವಣೆಯಲ್ಲಿ ಮತವನ್ನು ಗಳಿಸುವುದು ಬಿ.ಜೆ.ಪಿ ಪಕ್ಷದ ತಂತ್ರವಾಗಿದೆ. ಚಿಕ್ಕ ಮಂಗಳೂರಿನ ಕೊಪ್ಪಳದಲ್ಲಿ ದಲಿತರ ಮೇಲೆ ಹಲ್ಲೆ ಪ್ರಕರಣ, ಬ್ರಹ್ಮಾವರ ಸಮೀಪದ ಕೊಕ್ಕರ್ಣೆ ಎಂಬಲ್ಲಿ ಸಂಘಪರಿವಾರದ 30 ಮಂದಿ ಗೂಂಡಾಗಳು ಪ್ರವೀಣ್ ಪೂಜಾರಿ ಎಂಬ ಯುವಕನನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣ, ಇತ್ತೀಚೆಗೆ ಬಲಿಯಾದ ಬಂಟ್ವಾಳದ ಬಡಕುಟುಂಬದ ಅಮಾಯಕ ಯುವಕ ಹರೀಶ್ ಪೂಜಾರಿಯಂತಹ ಯುವಕರನ್ನು ಒಳಗೊಂಡು ಗುಜರಾತ್ ಹಾಗೂ ಈಶಾನ್ಯ ರಾಜ್ಯಗಳಲ್ಲಿ ದಲಿತರ ಹಾಗೂ ಅಲ್ಪಸಂಖ್ಯಾತರ ಮೇಲೆ ನಿರಂತರ ದೌರ್ಜನ್ಯವೆಸಗುತ್ತಿದ್ದು, ಹತ್ಯೆ-ಅತ್ಯಾಚಾರ-ಅನಾಚಾರ ಸಂಸ್ಕೃತಿಯನ್ನು ಜಾತಿ-ಮತ-ಭೇದ ಮರೆತು ಖಂಡಿಸಬೇಕಾದ ಅವಶ್ಯಕತೆ ಇದೆ. ಒಂದುವೇಳೆ ಮುಸ್ಲಿಂ ಅಥವಾ ಕ್ರಿಶ್ಚಿಯನ್ ಸಮುದಾಯದವರು ಇಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದಲ್ಲಿ ಕರಾವಳಿಯ ಪರಿಸ್ಥಿತಿ ಹೇಗಿರುತ್ತಿತ್ತು? ಈ ರೀತಿ ದಿನಂಪ್ರತಿ ಸಂಘಪರಿವಾರದ ಗೂಂಡಾ ಶಕ್ತಿಗಳು ವ್ಯಾಪಕವಾಗಿ ಗೋರಕ್ಷಣೆಯ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಂಡು ಭಯದ ವಾತಾವರಣ ನಿರ್ಮಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರಕಾರ ಹಾಗೂ ಪೊಲೀಸ್ ಇಲಾಖೆಯನ್ನು ಆಗ್ರಹಿಸುತ್ತೇವೆ ಎಂದರು.

ಕೋಮುವಾದದ ಹೆಸರಲ್ಲಿ ಕರಾವಳಿಯಲ್ಲಿ ನಿತ್ಯ ರಕ್ತದೋಕುಳಿ ನಡೆಯುತ್ತಿದೆ. ಮಂದಿರ-ಮಸೀದಿ-ಚರ್ಚುಗಳ ಮೇಲೆ ಯಾವುದಾದರೊಂದು ಕಾರಣ ಒಡ್ಡಿ ದಾಳಿ ನಡೆಸುವ ಸಮಾಜ ಘಾತುಕ ಶಕ್ತಿಗಳ ಬಗ್ಗೆ ಎಚ್ಚರವಹಿಸಬೇಕಾಗಿದೆ. ಪ್ರಸ್ತುತ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿ.ಜೆ.ಪಿ ಸರಕಾರ ಭಾರತದ ಶೋಷಿತರ ಪಾಲಿಗೆ ನರಕದ ಕೂಪವಾಗಿ ಪರಿಣಮಿಸಿದೆ. ಅಚ್ಚೇದಿನ್ ಎಂಬ ಹೆಸರಲ್ಲಿ ಅಧಿಕಾರಕ್ಕೆ ಬಂದ ಸರಕಾರ ಬಹು ಜನರ ಆಹಾರ ಸ್ವಾತಂತ್ರ್ಯ ಹಾಗೂ ಬದುಕುವ ಸ್ವಾತಂತ್ರ್ಯವನ್ನು ಕಸಿದುಕೊಂಡು ಭಾರತದ ಇತಿಹಾಸದಲ್ಲಿ ಹಿಂದೆಂದು ಕಂಡರಿಯದ ಮೂಲಭೂತ ಮಾನವ ಹಕ್ಕುಗಳನ್ನು ಹರಣ ಮಾಡುತ್ತಿದ್ದು ಇದು ಈ ದೇಶದ ದುರಂತವೇ ಸರಿ. ಇತ್ತೀಚೆಗೆ ಪ್ರಧಾನಿಯ ಹುಟ್ಟೂರಾದ ಗುಜರಾತ್ ನಲ್ಲೇ ದಲಿತರ ಹಾಗೂ ಅಲ್ಪಸಂಖ್ಯಾತರ ಮೇಲೆ ನಡೆದ ಕೃತ್ಯವನ್ನು ತಡೆಯಲು ವಿಫಲವಾದರೆ ಈ ದೇಶದ ಭದ್ರತೆಯ ಬಗ್ಗೆ ಸಂಶಯ ಉಂಟಾಗುತ್ತದೆ. ರಾಜ್ಯದಲ್ಲಿ ವಿದ್ಯಾರ್ಥಿಗಳ (ಎ.ಬಿ.ವಿ.ಪಿ) ಸಂಘಟನೆಗಳ ಮೂಲಕ ಸೇನಾ ವಿರುದ್ಧ ಕೂಗಿನ ಬಗ್ಗೆ ಕ್ರಮ ಕೈಗೊಳ್ಳಲು ಆಗ್ರಹಿಸುತ್ತಿರುವ ಬಿ.ಜೆ.ಪಿಗರಿಗೆ ಕಾಶ್ಮೀರದಲ್ಲಿ ದಿನಕ್ಕೊಂದರಂತೆ ಪಾಕಿಸ್ತಾನಿ ಧ್ವಜಗಳನ್ನು ಹಾರಿಸುವ ಅಶಾಂತಿ ಪ್ರಿಯರ ಬಗ್ಗೆ ಯಾಕೆ ಮಾತಾಡುತ್ತಿಲ್ಲ? ಡಿ.ವೈ.ಎಸ್.ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಅಹೋರಾತ್ರಿ ಪ್ರತಿಭಟಣೆ ನಡೆಸಿದ ಬಿ.ಜೆ.ಪಿಗರು ಡಿ.ವೈ.ಎಸ್.ಪಿ ಕಲ್ಲಪ್ಪ ಹಂಡಿಬಾಗ್ ಪ್ರಕರಣದಲ್ಲಿ ಮೌನವಾಗಿರುವುದು ಯಾಕೆ? ಈ ಪ್ರಕರಣದಲ್ಲಿ ಸಂಘಪರಿವಾರದ ಕೈವಾಡ ಇಲ್ಲವೇ? ಅಧಿಕಾರಿಗಳ ಪ್ರಕರಣದಲ್ಲಿ ಭಾವನಾತ್ಮಕ ಸನ್ನಿವೇಶವನ್ನು ರಾಜಕೀಯ ಲಾಭಕ್ಕೆ ನಡೆಸಿದ ಬಿ.ಜೆ.ಪಿ.ಗರು ಗಣಪತಿಯವರ ಪತ್ನಿ ಪಾವನಳ ದುಃಖ ವನ್ನು ತನ್ನ ಅಸ್ತ್ರವಾಗಿ ಬಳಸಿದೆ. ರಾಜಕೀಯವಾಗಿ ಪ್ರಚಾರ ಗಿಟ್ಟಿಸುವ ತಂತ್ರವಾಗಿದ್ದು ನ್ಯಾಯ ದೊರಕಿಸುವ ಯಾವುದೇ ಪ್ರಾಮಾಣಿಕತೆ ಹಾಗೂ ನೈತಿಕತೆ ಹೊಂದಿಲ್ಲ. ಆದುದರಿಂದ ಶಾಂತಿ ಪ್ರಿಯರಾದ ನಾವು ಕೋಮುವಾದ ಮುಕ್ತ ಜಿಲ್ಲೆಯನ್ನಾಗಿ ಮಾರ್ಪಡಿಸಲು ಪ್ರಾಮಾಣಿಕವಾಗಿ ಸರಕಾರವನ್ನು ಆಗ್ರಹಿಸುತ್ತಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಡಬ ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ.ವರ್ಗೀಸ್, ಕಡಬ ತಾ.ಪಂ. ಸದಸ್ಯ ಫಝಲ್ ಕೋಡಿಂಬಾಳ, ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಬಳ್ಳೇರಿ, ಉಪಾಧ್ಯಕ್ಷ ಎಸ್. ಅಬ್ದುಲ್ ಖಾದರ್, ಕಡಬ ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ, ಸದಸ್ಯರಾದ ಕೆ.ಎಂ. ಹನೀಫ್, ಅಶ್ರಫ್ ಶೇಡಿಗುಂಡಿ, ಸೈಮನ್ ಸಿ.ಜೆ., ಶರೀಫ್ ಎ.ಎಸ್., ಕಡಬ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರ.ಕಾರ್ಯದರ್ಶಿ ಡೇನಿಸ್ ಫೆರ್ನಾಂಡಿಸ್, ಪ್ರಮುಖರಾದ ಜೋಸ್ ಇಡೆಯಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News