ಕಲೆ-ಸಾಹಿತ್ಯಾಭಿರುಚಿ ಬದುಕಿನ ವಿಕಾಸಕ್ಕೆ ಪೂರಕ : ಮೋಹನ್ ರಾವ್

Update: 2016-08-22 15:24 GMT

ವಿಟ್ಲ,ಆ.22 : ಕಲೆ, ಸಾಹಿತ್ಯದ ಅಭಿರುಚಿಯು ಮಾನವ ಬದುಕಿನ ವಿಕಾಸಕ್ಕೆ ಪೂರಕವಾಗಿದೆ ಎಂದು ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ. ಮೋಹನರಾವ್ ಅಭಿಪ್ರಾಯಪಟ್ಟರು. ಬಂಟ್ವಾಳ ಎಸ್‌ವಿಎಸ್ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಸಂಘ ಆಯೋಜಿಸಿದ್ದ ಹೊಂಬೆಳಕು ಭಿತ್ತಿ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸುಖ, ನೆಮ್ಮದಿಯ ಬಾಳ್ವೆಗೆ ಸಾಹಿತ್ಯದ ಒಡನಾಟವು ಅತೀ ಅವಶ್ಯಕವಾದುದು. ಸಾಹಿತ್ಯದ ಚಿಕಿತ್ಸಕ ಗುಣವು ಸಮಾಜದಲ್ಲಿ ಮಾನವೀಯ ಸಂಬಂಧ ಹಾಗೂ ಸಹಬಾಳ್ವೆ ನೆಲೆಸುವುದಕ್ಕೆ ಪೋಷಕ ಶಕ್ತಿಯಾಗಿದೆ ಎಂದರು. ಶಾಲಾ-ಕಾಲೇಜುಗಳಲ್ಲಿರುವ ಭಿತ್ತಿ ಪತ್ರಿಕೆಗಳು ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿಯನ್ನು ಹುಟ್ಟಿಸುವ ಮೂಲಕ ಉತ್ತಮ ಸಂಸ್ಕಾರವನ್ನು ಜಾಗೃತಗೊಳಿಸುತ್ತದೆ. ಪುರಾಣ, ಇತಿಹಾಸದ ಅನೇಕ ರೋಚಕ ಕತೆಗಳು, ಐತಿಹಾಸಿಕ ಸಂಗತಿಗಳು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯವನ್ನು ಬೆಳೆಸುವುದಕ್ಕೆ ಸಹಾಯಕವಾಗುತ್ತದೆ. ಆಧುನಿಕ ಮಾರುಕಟ್ಟೆ ಕೇಂದ್ರಿತ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಸಮಾಜ ಘಾತುಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೆ ಆರೋಗ್ಯಪೂರ್ಣ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು. ಕಾಲೇಜು ಪ್ರಾಂಶುಪಾಲೆ ಶಶಿಕಲಾ ಕೆ. ಅಧ್ಯಕ್ಷತೆ ವಹಿಸಿದ್ದರು. ಹೊಂಬೆಳಕು ಭಿತ್ತಿ ಪತ್ರಿಕೆ ಸಂಯೋಜಕ, ಉಪನ್ಯಾಸಕ ಚೇತನ್ ಮುಂಡಾಜೆ ಪ್ರಾಸ್ತಾವನೆಗೈದರು. ವಿದ್ಯಾರ್ಥಿ ಪೃಥ್ವಿ ಉಪಸ್ಥಿತರಿದ್ದರು. ಭಿತ್ತಿ ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾದ ಅಕ್ಷತ ಪ್ರಾರ್ಥಿಸಿದರು. ಮೇಘನ ಪೈ ಜೆ. ವಂದಿಸಿದರು. ಅನನ್ಯ ಜಿ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News