×
Ad

ಉಪ್ಪಿನಂಗಡಿ: ಪಂಚಾಯತ್‌ಗೆ ಹೊರರಾಜ್ಯದ ಅಧಿಕಾರಿಗಳ ಅಧ್ಯಯನ ತಂಡ ಭೇಟಿ

Update: 2016-08-22 21:01 IST

ಉಪ್ಪಿನಂಗಡಿ: ಹೊರರಾಜ್ಯದ ಅಧಿಕಾರಿಗಳ ಅಧ್ಯಯನ ತಂಡ ಸೋಮವಾರ ಉಪ್ಪಿನಂಗಡಿ ಗ್ರಾಮ ಪಂಚಾಯತ್‌ಗೆ ಆಗಮಿಸಿ, ಇಲ್ಲಿನ ಘನತ್ಯಾಜ್ಯ ನಿರ್ವಹಣೆ ಮತ್ತು ಶೌಚಾಲಯ ನಿರ್ವಹಣೆ ಬಗ್ಗೆ ಅಧ್ಯಯನ, ಪರಿಶೀಲನೆ ನಡೆಸಿತು.

 ಇಬ್ಬರು ಐಎಎಸ್‌ಗಳನ್ನೊಳಗೊಂಡ ಬಿಹಾರ, ಜಾರ್ಖಂಡ್, ಉತ್ತರಪ್ರದೇಶ, ಅಸ್ಸಾಂ, ಪಶ್ಚಿಮಬಂಗಾಳ, ಜಾರ್ಖಂಡ್ ರಾಜ್ಯದ ಅಧಿಕಾರಿಗಳ ತಂಡ ಉಪ್ಪಿನಂಗಡಿ ಗ್ರಾಮ ಪಂಚಾಯತ್‌ನ ಘನತ್ಯಾಜ್ಯ ಘಟಕಕ್ಕೆ ಆಗಮಿಸಿ, ಬಳಿಕ ಪಟ್ಟಣದ ಕಸ ಸಂಗ್ರಹಣೆ, ಕಸ ವಿಲೇವಾರಿ, ಗೊಬ್ಬರ ತಯಾರಿ ಹೀಗೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ಪಡೆದುಕೊಂಡತು. ಬಳಿಕ ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿ ಶುಚಿ ಸಾರ್ವಜನಿಕ ಶೌಚಾಲಯಕ್ಕೆ ಭೇಟಿ ನೀಡಿ ಅದರ ನಿರ್ವಹಣೆ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಉಪ್ಪಿನಂಗಡಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ, ಶೌಚಾಲಯ ಬಳಕೆ, ಪೈಪ್ ಕಂಪೋಸ್ಡ್ ಗೊಬ್ಬರ ತಯಾರಿ ಬಗ್ಗೆ ಮಾಹಿತಿ ಪಡೆದುಕೊಂಡರು. ಉಪ್ಪಿನಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದ ತಂಡ ಅಲ್ಲಿನ ಶೌಚಾಲಯ ನಿರ್ವಹಣೆ, ನ್ಯಾಪ್‌ಕಿನ್ ಬರ್ನಿಂಗ್ ಮೆಷಿನ್ ಬಗ್ಗೆ ಮಾಹಿತಿ ಪಡೆದುಕೊಂಡರು. ಅಲ್ಲದೆ, ಗ್ರಾಮ ಪಂಚಾಯತ್ ಕುಡಿಯುವ ನೀರು ಸರಬರಾಜು ಮಾಡುವ ವ್ಯವಸ್ಥೆಗಳ ಬಗ್ಗೆಯೂ ಪರಿಶೀಲನೆ ನಡೆಸಿ, ಬಳಕೆದಾರರಿಂದ ನೀರಿನ ಶುಲ್ಕ ವಸೂಲಿ ವ್ಯವಸ್ಥೆ ಬಗ್ಗೆಯೂ ತಿಳಿದುಕೊಂಡರಲ್ಲದೆ, ಇಲ್ಲಿನ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ತಂಡದಲ್ಲಿ ಐಎಎಸ್ ಅಧಿಕಾರಿಗಳಾದ ಬಿಹಾರದ ಯೋಜನಾ ನಿರ್ದೇಶಕ ಶಶಿಕಾಂತ ತಿವಾರಿ, ಉತ್ತರ ಪ್ರದೇಶದ ಮುಖ್ಯ ಅಭಿವೃದ್ಧಿ ಅಧಿಕಾರಿ ಪುಲ್‌ಕಿತ್ ಖಹರೆ ಅವರನ್ನು ಒಳಗೊಂಡಂತೆ ಜಿಲ್ಲಾ ಪಂಚಾಯತ್, ವಿಶ್ವ ಬ್ಯಾಂಕ್, ಆರೋಗ್ಯ ಇಲಾಖೆ, ಎಂಜಿನಿಯರಿಂಗ್ ಮೊದಲಾದ ವಿವಿಧ ಇಲಾಖೆಗಳ ಪಶ್ಚಿಮ ಬಂಗಾಳದ ಸಂಜುಕ್ತ ರಾಯ್, ಬಿ.ಕೆ.ಡಿ. ರಾಜ, ಬಿಹಾರದ ವೀರಮಣಿ ಕುಮಾರ್, ನೀರಜ್ ಕುಮಾರ್, ಜಾರ್ಖಂಡ್‌ನ ಸುರೇಶ್ ಕುಮಾರ್, ಆರ್.ಎನ್. ಶರ್ಮ, ಉತ್ತರ ಪ್ರದೇಶದ ಕಮಲ್ ಕಿಶೋರ್, ಅರುಣ್ ಕುಮಾರ್ ಯಾದವ್, ಸಂಜೀವ್ ಕುಮಾರ್ ಯಾದವ್, ಅಸ್ಸಾಂನ ಗಾಯತ್ರಿ ಭಟ್ಟಾಚಾರ್ಯ, ಮೋಹಿನ್ ಉದಿನ್ ದಿವಾನ್ ಇದ್ದರು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಸಂತೋಷ್ ಕುಮಾರ್, ನೋಡೆಲ್ ಅಧಿಕಾರಿಯಾಗಿ ಮಾರ್ಗದರ್ಶನ ನೀಡಿದರು. ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಅಬ್ದುಲ್ ರಹಿಮಾನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ಅಸಾಫ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಗದೀಶ್, ಜಿಲ್ಲಾ ಸಮುದಾಯ ಅಭಿವೃದ್ಧಿ ಅಧಿಕಾರಿ ಸತೀಶ್ ಭಟ್, ಜಿಪಂ. ಇಂಜಿನಿಯರ್ ಪ್ರಭಾಚಂದ್ರ ಯೋಜನೆಗಳ ಅನುಷ್ಠಾನದ ಬಗ್ಗೆ ಮಾಹಿತಿ ನೀಡಿದರು.

ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಶಾಂತಿಗೋಡು, ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭವಾನಿ ಚಿದಾನಂದ, ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ಸುಜಾತ ಕೃಷ್ಣ, ಜಿಲ್ಲಾ ಕೆಡಿಪಿ ಸದಸ್ಯ ಯು.ಕೆ. ಅಯ್ಯೂಬ್, ಗ್ರಾಮ ಪಂಚಾಯತ್ ಸದಸ್ಯರಾದ ಸುನಿಲ್ ದಡ್ಡು, ಯು.ಕೆ. ಇಬ್ರಾಹಿಂ, ಯು.ಟಿ. ತೌಶೀಫ್ ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News