×
Ad

ಉಪ್ಪಿನಂಗಡಿ: ಪ್ರತಿಭೋತ್ಸವ - ಮಕ್ಕಳ ಸಾಂಸ್ಕೃತಿಕ ಹಬ್ಬ’ ಕಾರ್ಯಕ್ರಮ

Update: 2016-08-22 21:03 IST

ಉಪ್ಪಿನಂಗಡಿ: ವಿದ್ಯಾರ್ಥಿಗಳು ಪ್ರದರ್ಶಿಸುವ ಕಲೆಯಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಅಂಶವಿರುವಂತೆ ಶಿಕ್ಷಕರು ನೋಡಿಕೊಳ್ಳಬೇಕಾಗಿರುವುದು ಅಗತ್ಯವಾಗಿದ್ದು, ಸಣ್ಣ ಪ್ರಾಯದಲ್ಲೇ ಉತ್ತಮ ಮಾರ್ಗದರ್ಶನ ದೊರೆತರೆ ಮಾತ್ರ ಜೀವನದಲ್ಲಿ ಬದಲಾವಣೆ ಸಾಧ್ಯವಾಗುತ್ತದೆ ಎಂದು ಶಾಸಕಿ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಶ್ರೀಮತಿ ಶಕುಂತಳಾ ಟಿ. ಶೆಟ್ಟಿ ತಿಳಿಸಿದರು.
 ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಹಾಗೂ ಸೈಂಟ್ ಮೇರಿಸ್ ಮತ್ತು ಸಂತ ಫಿಲೋಮಿನಾ ವಿದ್ಯಾಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಉಪ್ಪಿನಂಗಡಿಯ ಸೈಂಟ್ ಮೇರಿಸ್ ವಿದ್ಯಾಸಂಸ್ಥೆಯಲ್ಲಿ ಆರಂಭಗೊಂಡ ‘ಪ್ರತಿಭೋತ್ಸವ - ಮಕ್ಕಳ ಸಾಂಸ್ಕೃತಿಕ ಹಬ್ಬ’ ಪುತ್ತೂರು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ- ಕಲೋತ್ಸವ-2016 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪ್ರತಿಯೋರ್ವರಲ್ಲೂ ಒಂದಲ್ಲ ಒಂದು ಪ್ರತಿಭೆಯಿದ್ದು, ಪ್ರತಿಭೆಗಳ ಅನಾವರಣಕ್ಕೆ ಮೊದಲಿನಂತೆ ಈಗ ಅವಕಾಶಗಳ ಕೊರತೆಯಿಲ್ಲ. ಇರುವ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು. ಆಗ ಈ ಸಮಾಜದಲ್ಲಿ ಹೇಡಿಯಾಗಿ ಬಾಳುವುದಕ್ಕಿಂತ ಎಲ್ಲವನ್ನು ಎದುರಿಸಿ ಬಾಳುವ ಯುವ ಸಮೂಹದ ಸೃಷ್ಟಿ ಸಾಧ್ಯ. ಮಕ್ಕಳಲ್ಲಿ ಆಂತರಿಕವಾಗಿ ಹುದುಗಿರುವ ಪ್ರತಿಭೆ ಅನಾವರಣಗೊಳಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದರು.
ಪುತ್ತೂರು ಸಿರೋಮಲಂಕರ ಸಭೆಯ ಧರ್ಮಾಧ್ಯಕ್ಷ ರೆ.ಡಾ.ಗೀವರ್ಗಿಸ್ ದಿವಾನಿಯೊಸ್ ಆಶೀರ್ವಚನ ನೀಡಿ, ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕಾಗಿದೆ. ದೇವರು ಎಲ್ಲರಿಗೂ ಹಲವು ಪ್ರತಿಭೆಯನ್ನು ಧಾರೆಯೆರೆದಿದ್ದು, ಅದನ್ನು ಉಪಯೋಗಿಸುವ ಮೂಲಕ ಆ ಪ್ರತಿಭೆ ಬೆಳಗುವಂತೆ ಮಾಡುವ ಕೆಲಸ ನಮ್ಮಿಂದಾಗಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು, ನಯ, ವಿನಯ ಮುಂತಾದ ಸಂಸ್ಕಾರಯುತ ವಿಚಾರಗಳನ್ನು ಮೈಗೂಡಿಸಿಕೊಳ್ಳಲು ಸಾಧ್ಯ ಎಂದರು.
ಉಪ್ಪಿನಂಗಡಿ ದೀನರ ಕನ್ಯಾಮಾತೆ ದೇವಾಲಯದ ಧರ್ಮಗುರು, ಸೈಂಟ್ ಮೇರಿಸ್ ಹಾಗೂ ಸಂತ ಫೀಲೋಮಿನಾ ವಿದ್ಯಾಸಂಸ್ಥೆಗಳ ಸಂಚಾಲಕ ವಂ.ಫಾ. ರೊನಾಲ್ಡ್ ಪಿಂಟೋ ಆಶೀರ್ವಚನ ನೀಡಿ ಮಕ್ಕಳಲ್ಲಿ ಹುದುಗಿರುವ ಸುಪ್ತ ಪ್ರತಿಭೆಗಳು ಇಂತಹ ವೇದಿಕೆಗಳು ದೊರೆತಾಗ ಮಾತ್ರ ಬೆಳಕಿಗೆ ಬರಲು ಸಾಧ್ಯ. ಇಂತಹ ಕಾರ್ಯಕ್ರಮಗಳು ಮಕ್ಕಳ ಉಜ್ವಲ ಭವಿಷ್ಯಕ್ಕೆ ಅಡಿಪಾಯವಾಗಲಿ ಎಂದು ಶುಭಹಾರೈಸಿದರು.
ಜಿಲ್ಲಾ ಪಂಚಾಯತ್ ಸದಸ್ಯೆ ಶಯನಾ ಜಯಾನಂದ್ ಮಾತನಾಡಿ, ಕೇವಲ ಅಂಕಗಳಿಕೆಯಿಂದ ಮಾತ್ರ ಉತ್ತಮ ಜೀವನ ರೂಢಿಸಿಕೊಳ್ಳಲು ಸಾಧ್ಯವಿಲ್ಲ. ಇದರೊಂದಿಗೆ ಬದುಕುವ ಶಿಕ್ಷಣ ಕೂಡ ಅತೀ ಮುಖ್ಯ. ಇಂತಹ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ಜೀವನ ಮೌಲ್ಯಗಳ ಬೋಧನೆ ಸಾಧ್ಯ. ಇಲ್ಲಿ ಸ್ಪರ್ಧೆಗಿಂತಲೂ ಭಾಗವಹಿಸುವಿಕೆ ಮುಖ್ಯವಾಗಿದ್ದು, ಆದ್ದರಿಂದಿ ಎಲ್ಲರೂ ಇಲ್ಲಿ ವಿಜಯೀಗಳೇ ಎಂದರು.
ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ. ಮಾತನಾಡಿ, ನಾವಿಂದು ಶಿಕ್ಷಿತರಾಗುತ್ತಿದ್ದರೂ, ನಮ್ಮಲ್ಲಿ ಮಾನವೀಯ ಮೌಲ್ಯಗಳು ಅಧಃಪತನ ಹೊಂದುತ್ತಿವೆ. ಆದ್ದರಿಂದ ಉತ್ತಮ ಶಿಕ್ಷಣದೊಂದಿಗೆ ನಾವೆಲ್ಲಾ ಮುಂದೆ ಸಮಾಜದ ಆಸ್ತಿಗಳಾಗಬೇಕಾಗಿದೆ. ಗುರುಭಕ್ತಿ, ರಾಷ್ಟ್ರಪ್ರೇಮವನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ ಮಾತನಾಡಿ, ಉತ್ತಮ ಯುವಜನಾಂಗವನ್ನು ರೂಪಿಸುವಲ್ಲಿ ಶಿಕ್ಷಕರೊಂದಿಗೆ ಪೋಷಕರ ಪಾತ್ರವೂ ಮಹತ್ವದಾಗಿದ್ದು, ಉತ್ತಮ ಸಂಸ್ಕಾರಯುತ ಮೌಲ್ಯಗಳನ್ನು ಅವರಲ್ಲಿ ತುಂಬುವುದರೊಂದಿಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದರು.
 ತಾಲೂಕು ಪಂಚಾಯತ್ ಸದಸ್ಯೆ ಸುಜಾತಕೃಷ್ಣ ಆಚಾರ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್., ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಶಿವರಾಮ ಎಚ್.ಡಿ., ಪ್ರಾಥಮಿಕ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಮಾಮಚ್ಚನ್ ಮಾತನಾಡಿದರು. ವೇದಿಕೆಯಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ರಾಬರ್ಟ್ ಡಿಸೋಜ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಾಹಂ, ಜಿಲ್ಲಾ ಪ್ರಾಥಮಿಕ ಸರಕಾರಿ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ- ಶಿಕ್ಷಕ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಗ್ರೇಸಿ ಎ. ಮಿರಾಂಡ ಸ್ವಾಗತಿಸಿದರು. ಸಂತ ಫಿಲೋಮಿನಾ ಶಾಲೆಯ ಮುಖ್ಯೋಪಾಧ್ಯಾಯಿನಿ ಫಿಲೋಮಿನಾ ಪಾಸ್ ವಂದಿಸಿದರು. ಶಿಕ್ಷಕರಾದ ದೀಪಶ್ರಿ, ಹೆರಾಲ್ಡ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News