×
Ad

ಮತದಾರ ಗೋಪ್ಯತೆ ಯಂತ್ರ ಕುರಿತು ನಿರ್ಧರಿಸಲು ಕೇಂದ್ರದಿಂದ ಸಮಿತಿ ರಚನೆ

Update: 2016-08-22 21:23 IST

ಹೊಸದಿಲ್ಲಿ,ಆ.22: ಮತದಾರ ಗೋಪ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮತಎಣಿಕೆಯ ಸಂದರ್ಭದಲ್ಲಿ ಮತದಾನದ ಸ್ವರೂಪವು ಬಹಿರಂಗಗೊಳ್ಳುವುದನ್ನು ತಡೆಯಲು ನೂತನ ಯಂತ್ರಗಳ ಬಳಕೆಯ ಬಗ್ಗೆ ನಿರ್ಧಾರವೊಂದನ್ನು ಕೈಗೊಳ್ಳಲು ಸಚಿವರ ಸಮಿತಿಯೊಂದನ್ನು ಕೇಂದ್ರವು ರಚಿಸಿದೆ.
ಮುಂದಿನ ತಿಂಗಳೊಳಗೆ ಈ ಬಗ್ಗೆ ನಿರ್ಧಾರವೊಂದನ್ನು ಕೈಗೊಳ್ಳುವಂತೆ ಸರ್ವೋಚ್ಚ ನ್ಯಾಯಾಲಯವು ನಿರ್ದೇಶ ನೀಡಿರುವ ಹಿನ್ನೆಲೆಯಲ್ಲಿ ಕೇಂದ್ರವು ಈ ಕ್ರಮವನ್ನು ಕೈಗೊಂಡಿದೆ.

ಯಂತ್ರವನ್ನು ಬಳಸಬಹುದೇ ಎಂಬ ಬಗ್ಗೆ ಕೇಂದ್ರ ಸಂಪುಟಕ್ಕೆ ಶಿಫಾರಸು ಮಾಡಲು ಪ್ರಧಾನಿ ನರೇಂದ್ರ ಮೋದಿಯವರ ನಿರ್ದೇಶನದ ಮೇರೆಗೆ ಗೃಹಸಚಿವ ರಾಜನಾಥ ಸಿಂಗ್ ಅವರ ನೇತೃತ್ವದಲ್ಲಿ ಐವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ವಿತ್ತ ಸಚಿವ ಅರುಣ್ ಜೇಟ್ಲಿ, ರಕ್ಷಣಾ ಸಚಿವ ಮನೋಹರ ಪಾರಿಕ್ಕರ್, ಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತು ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರು ಸಮಿತಿಯ ಇತರ ಸದಸ್ಯರಾಗಿದ್ದಾರೆ ಎಂದು ಕಾನೂನು ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ. ಮತದಾರ ಗೋಪ್ಯತೆಯನ್ನು ಹೆಚ್ಚಿಸಲು ಮತ ಎಣಿಕೆ ಸಂದರ್ಭದಲ್ಲಿ ಮತದಾನದ ಸ್ವರೂಪವು ಬಹಿರಂಗಗೊಳ್ಳುವುದನ್ನು ತಡೆಯುವ ‘ಟೋಟಲೈಸರ್’ ಯಂತ್ರಗಳ ಬಳಕೆಯನ್ನು ಚುನಾವಣಾ ಆಯೋಗವು 2008ರಲ್ಲಿ ಪ್ರಸ್ತಾಪಿಸಿತ್ತು. ಈ ಪ್ರಸ್ತಾವನೆಗೆ ಕಾನೂನು ಸಚಿವಾಲಯವು ಬೆಂಬಲ ಸೂಚಿಸಿತ್ತು.
ಆದರೆ ಈ ಪ್ರಸ್ತಾವನೆಯು ಸರಕಾರದ ಬಾಳಿ ಬಾಕಿಯಾಗಿತ್ತು. ಆ.5ರಂದು ರಿಟ್ ಅರ್ಜಿಯೊಂದರ ವಿಚಾರಣೆ ಸಂದರ್ಭ ಸರ್ವೋಚ್ಚ ನ್ಯಾಯಾಲಯವು ಈ ವಿಷಯದಲ್ಲಿ ಅಂತಿಮ ನಿರ್ಧಾರವೊಂದನ್ನು ಕೈಗೊಳ್ಳಲು ಕೇಂದ್ರಕ್ಕೆ ಎಂಟು ವಾರಗಳ ಕಾಲಾವಕಾಶ ನೀಡಿದ್ದು,ಮುಂದಿನ ವಿಚಾರಣೆಯನ್ನು 2017,ಫೆಬ್ರುವರಿಗೆ ನಿಗದಿಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News