70,000 ಮಂದಿಗೆ ಮಕ್ಕಾಗೆ ಪ್ರವೇಶ ನಿರಾಕರಣೆ
ಮಕ್ಕಾ, ಆ.23: ಹಜ್ ಪರ್ಮಿಟ್ ಇಲ್ಲದೆ ಪವಿತ್ರ ನಗರಿಯನ್ನು ಪ್ರವೇಶಿಸಲೆತ್ನಿಸಿದ 70,000 ಮಂದಿಯನ್ನು ಪೊಲೀಸರು ಹಿಂದೆ ಕಳುಹಿಸಿದ್ದಾರೆ. ಹಜ್ ಯಾತ್ರಿಗಳನ್ನು ಸಾಗಿಸುತ್ತಿದ್ದ ಸುಮಾರು 28,000 ಕ್ಕೂ ಮಿಕ್ಕಿ ವಾಹನಗಳು ನಿಯಮಗಳನ್ನು ಉಲ್ಲಂಘಿಸಿವೆಯೆಂದು ಹೇಳಲಾಗಿದ್ದು 25ಕ್ಕಿಂತ ಕಡಿಮೆ ಪ್ರಯಾಣಿಕರಿದ್ದ ವಾಹನಗಳನ್ನು ಹಿಂದಕ್ಕೆ ಕಳುಹಿಸಲಾಗಿದೆ. ಅಂತೆಯೇ ನಿಗದಿತ ಸಂಖ್ಯೆಯ ಪ್ರಯಾಣಿಕರಿದ್ದರೂ ಪರ್ಮಿಟ್ ಹೊಂದದೇ ಇದ್ದ ವಾಹನಗಳನ್ನು ಕೂಡ ಹಿಂದಕ್ಕೆ ಕಳುಹಿಸಲಾಗಿದೆ. ಈ ವಿವರಗಳನ್ನು ಹಜ್ ಸೆಕ್ಯುರಿಟಿ ಕಮಾಂಡ್ ಬಿಡುಗಡೆಗೊಳಿಸಿದೆ. ಹಜ್ ಯಾತ್ರೆಗೆ ಬರುವ ಎಲ್ಲರೂ ಅಗತ್ಯ ಪರ್ಮಿಟ್ ಗಳನ್ನು ಹೊಂದಿರಲೇಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ಪವಿತ್ರ ಮಸೀದಿಗಳ ಕಸ್ಟೋಡಿಯನ್ ಆಗಿರುವ ದೊರೆ ಸಲ್ಮಾನ್ ಅವರು ಸೂಚಿಸಿರುವ ಎಲ್ಲಾ ಕ್ರಮಗಳನ್ನೂ ಅನುಸರಿಸಲು ಸುರಕ್ಷಾ ಪಡೆಗಳಿಗೆ ಸಹಕರಿಸಬೇಕೆಂದೂ ಅಧಿಕಾರಿಗಳು ಹೇಳಿದ್ದಾರಲ್ಲದೆ ನಿಯಮ ಉಲ್ಲಂಘಕರಿಗೆ ಶಿಕ್ಷೆ ಕಾದಿದೆಯೆಂದು ತಿಳಿಸಿದ್ದಾರೆ.
ಇನ್ನೊಂದು ಬೆಳವಣಿಗೆಯಲ್ಲಿ ಫೋರ್ಜರಿ ಮಾಡಲ್ಪಟ್ಟ ಪಾಸ್ ಪೋರ್ಟ್ ಗಳೊಂದಿಗೆಹಜ್ ಯಾತ್ರೆ ಕೈಗೊಳ್ಳಲು ವಿಮಾನವೇರಲು ಯತ್ನಿಸಿದ 177 ಇಂಡೋನೇಷ್ಯ ನಾಗರಿಕರನ್ನು ಮನಿಲಾದಲ್ಲಿ ತಡೆಯಲಾಗಿದೆ. ಈ ನಕಲಿ ಪಾಸ್ ಪೋರ್ಟ್ ಗಳು ಅವರಿಗೆ ಹೇಗೆ ದೊರೆಯಿತೆಂಬುದರ ಬಗ್ಗೆ ಫಿಲಿಪ್ಪೀನ್ಸ್ ಇಮಿಗ್ರೇಶನ್ ವಿಭಾಗದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅವರನ್ನೆಲ್ಲಾ ಮುಂದಿನ ಎರಡು ದಿನಗಳಲ್ಲಿ ದೇಶದಿಂದ ಹೊರ ಕಳುಹಿಸಲಾಗುವುದೆಂದು ತಿಳಿದು ಬಂದಿದೆ. ಅವರೊಂದಿಗೆ ಹಜ್ ಯಾತ್ರೆಗೆ ತೆರಳಲಿದ್ದ ಐದು ಮಂದಿ ಫಿಲಿಪ್ಪೀನ್ಸ್ ನಾಗರಿಕರನ್ನೂ ಬಂಧಿಸಲಾಗಿದೆ.