×
Ad

ದ.ಕ., ಉಡುಪಿ, ಉತ್ತರ ಕನ್ನಡದಲ್ಲಿ ಪೌರ ರಕ್ಷಣಾ ದಳ ರಚನೆ: ಗೃಹರಕ್ಷಕ ದಳದ ಎಡಿಜಿಪಿ ಎನ್.ಶಿವಕುಮಾರ್

Update: 2016-08-23 14:17 IST

ಮಂಗಳೂರು, ಆ.23: ಕೇಂದ್ರ ಸರಕಾರವು ದ.ಕ, ಉಡುಪಿ, ಉ.ಕನ್ನಡದಲ್ಲಿ ಪೌರ ರಕ್ಷಣಾ ಘಟಕ ರಚಿಸಲು ಸೂಚಿಸಿದ್ದು ಆರು ತಿಂಗಳಲ್ಲಿ ಸ್ಥಾಪಿಸಲಾಗುವುದು ಎಂದು ಗೃಹರಕ್ಷಕದಳದ ಎಡಿಜಿಪಿ ಎನ್. ಶಿವಕುಮಾರ್ ಹೇಳಿದರು.

ಅವರು ಮೇರಿಹಿಲ್‌ನಲ್ಲಿರುವ ಜಿಲ್ಲಾ ಗೃಹರಕ್ಷಕ ದಳ ಕಚೇರಿಗೆ ಭೇಟಿ ನೀಡಿ ಮಾತನಾಡಿದರು.

ಈಗಾಗಲೆ ಪೌರ ರಕ್ಷಣಾ ದಳ ಬೆಂಗಳೂರು, ರಾಯಚೂರು, ಉ.ಕ ದ ಕೈಗಾದಲ್ಲಿಕಾರ್ಯನಿರ್ವಹಿಸುತ್ತಿದೆ. ಬೆಂಗಳೂರಿನಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ನಮ್ಮ ದೇಶದ ಮೇಲೆ ಯುದ್ದವಾದರೆ ಪ್ರತಿಯೊಬ್ಬರು ದೇಶಕ್ಕಾಗಿ ಹೋರಾಡಬೇಕಾಗುತ್ತದೆ. ಅದಕ್ಕೆ ಬೇಕಾದ ತಯಾರಿಗಳು ಆಗಬೇಕಾಗಿದೆ. ಸ್ಥಳೀಯಾಡಳಿತದ ಜೊತೆ ಕೈಜೋಡಿಸಿ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಪೌರ ರಕ್ಷಕ ದಳ ಕಾರ್ಯಚರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪೌರ ರಕ್ಷಣಾ ಘಟಕ ಸ್ಥಾಪಿಸಲು ಕೇಂದ್ರ ಸರ್ಕಾರದ ದಿಂದ ಆದೇಶ ಬಂದಿದೆ. ಗೃಹ ರಕ್ಷಕ ದಳದ ಚೀಪ್ ಕಮಾಂಡೆಂಟ್ ಇದರ ರಚನೆ ಮಾಡಬೇಕಾಗಿದೆ. ಇದರಲ್ಲಿ ಕಾರ್ಯನಿರ್ವಹಿಸಲು ಇಚ್ಚೆಯುಳ್ಳವರು ತಮ್ಮ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅರ್ಜಿಯನ್ನು ನೀಡಬೇಕಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ 11 ಸಾವಿರ ಮಂದಿ ಗೃಹರಕ್ಷಕರು ಪ್ರತಿನಿತ್ಯ ಕಾರ್ಯನಿರ್ವಹಿಸುತ್ತಿದ್ದಾರೆ. ವಿವಿಧ ಇಲಾಖೆಗಳಲ್ಲಿ ದಿನೇದಿನೇ ಬೇಡಿಕೆ ಹೆಚ್ಚುತ್ತಿದೆ. ಕರ್ತವ್ಯ ಭತ್ಯೆ ಹೆಚ್ಚಿಸಲಾಗಿದೆ. ಸಿಬ್ಬಂದಿಗಳನ್ನು ತರಬೇತಿ ನೀಡಿ ಸನ್ನದ್ಧಗೊಳಿಸಲಾಗಿದೆ ಎಂದರು.

ಅವಿಭಜಿತ ಜಿಲ್ಲೆಯಲ್ಲಿ ಗೃಹರಕ್ಷಕ ಸಿಬ್ಬಂದಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಮೆಚ್ಚುಗೆ ಪಡೆದಿದ್ದಾರೆ. ಮಂಗಳೂರು ಜಿಲ್ಲೆಗೆ ಈ ಹಿಂದಿದ್ದ 800 ಮಂದಿ ಸಿಬ್ಬಂದಿಗಳ ಮಿತಿಯನ್ನು ಸಾವಿರಕ್ಕೆ ಏರಿಸಲಾಗಿದೆ. ಇದಕ್ಕಾಗಿ ನೇಮಕಾತಿ ನಡೆಯುತ್ತಿದ್ದು ಪೊಲೀಸ್‌ವೆರಿಫಿಕೇಶನ್ ಆದ ಕೂಡಲೇ ಕರ್ತವ್ಯಕ್ಕೆ ನಿಯೋಜನೆಗೊಳ್ಳಲಿದ್ದಾರೆ ಎಂದರು.

ಪ್ರಸ್ತುತ 14 ಘಟಕಗಳಲ್ಲಿ 693 ಮಂದಿ ಇದ್ದು ಈ ಪೈಕಿ 269 ಮಂದಿ ಪ್ರತಿನಿತ್ಯ ಜಿಲ್ಲೆಯ ಪೊಲೀಸ್, ಅಬಕಾರಿ, ಸಾರಿಗೆ, ಗಣಿಮತ್ತು ಭೂವಿಜ್ಞಾನ ಇಲಾಖೆ, ಕುಕ್ಕೆ ಸುಬ್ರಹ್ಮಣ್ಯ ದೇಗುಲ, ಎನ್‌ಎಂಪಿಟಿ ಹಾಗೂ ಆಕಾಶವಾಣಿ ಕೇಂದ್ರಗಳಲ್ಲಿ ಕರ್ತವ್ಯನಿರತರಾಗಿದ್ದಾರೆ. ಇತರೇ ಇಲಾಖೆಗಳಲ್ಲೂ ನಿಯೋಜನೆಗೆ ಹೆಚ್ಚಿನ ಬೇಡಿಕೆ ಬಂದಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಉಡುಪಿ ಗೃಹರಕ್ಷಕ ದಳ ಕಮಾಂಡೆಂಟ್ ಪ್ರಶಾಂತ್, ದ.ಕ ಜಿಲ್ಲಾ ಗೃಹರಕ್ಷಕ ದಳ ಕಮಾಂಡೆಂಟ್ ಮುರಳಿ ಮೋಹನ ಚೂಂತಾರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News