ಪತಿಯನ್ನು ಕೊಲೆಗೈದಿದ್ದ ಪತ್ನಿಗೆ ಜೀವಾವಧಿ ಶಿಕ್ಷೆ

Update: 2016-08-23 11:02 GMT

ಮಂಗಳೂರು, ಆ.23: ತನ್ನ ಪತಿಯನ್ನು ನೈಲಾನ್ ಹಗ್ಗದಿಂದ ಕೊಲೆ ಮಾಡಿದ ಅಪರಾಧಿ ಪತ್ನಿ ಪ್ರಶಾಂತಿ(28)ಎಂಬಾಕೆಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಎಸ್. ಬೀಳಗಿ ಜೀವಾವಧಿ ಶಿಕ್ಷೆ ಮತ್ತು 1 ಲಕ್ಷ ರೂ. ದಂಡವನ್ನು ವಿಧಿಸಿ ಆದೇಶಿಸಿದ್ದಾರೆ. ಅಪರಾಧಿಯು ದಂಡವನ್ನು ತೆರಲು ತಪ್ಪಿದಲ್ಲಿ ಮತ್ತೆ ಒಂದು ವರ್ಷ ಹೆಚ್ಚುವರಿ ಕಾರಾಗೃಹ ಶಿಕ್ಷೆಯನ್ನು ಅನುಭವಿಸಬೇಕಾಗಿದೆ. 

2014 ರ ಜೂ.20 ರಂದು ಬೆಳ್ತಂಗಡಿ ತಾಲೂಕಿನ ಕರಿಮಣೇಲು ಪುಂಜಾಲಬೈಲು ಹೊಸ ಹೊಕ್ಲುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಹರೀಶ್ ನಾಯ್ಕ (44) ನನ್ನು ಅವರ ಪತ್ನಿ ಪ್ರಶಾಂತಿ ನೈಲಾನ್ ಹಗ್ಗದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಳು. ಪ್ರೀತಿಸಿ ಮದುವೆಯಾಗಿದ್ದ ಹರೀಶ್ ನಾಯ್ಕ ಮತ್ತು ಪ್ರಶಾಂತಿ ನಂತರ ಪ್ರತಿದಿನ ಜಗಳವಾಡುತ್ತಿದ್ದರು. ಇದೇ ಕಾರಣದಿಂದ ಬೇಸತ್ತು ಪ್ರಶಾಂತಿ ಪತಿಯನ್ನು ಕೊಲೆ ಮಾಡಿದ್ದಳು. ಕೊಲೆ ಮಾಡಿದ ನಂತರ ಪ್ರಶಾಂತಿ ಪತಿಯ ಅಕ್ಕನ ಮನೆಗೆ ಹೋಗಿ ಗಂಡ ಮಧ್ಯಾಹ್ನ ಬಂದು ಮಲಗಿದವರು ಎದ್ದೇಳಲಿಲ್ಲ ಎಂದು ತಿಳಿಸಿದ್ದಳು.

ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪ್ರಶಾಂತಿಯನ್ನು ಬಂಧಿಸಲಾಗಿತ್ತು. ಪ್ರಕರಣದ ಸಂಬಂಧ ನ್ಯಾಯಾಲಯ 17 ಸಾಕ್ಷಿದಾರರನ್ನು ವಿಚಾರಣೆ ನಡೆಸಿತ್ತು. ವಾದ ವಿವಾದ ಆಲಿಸಿದ ನ್ಯಾಯಾಲಯ ಇಂದು ಆರೋಪಿಗೆ ಜೀವಾವಧಿ ಶಿಕ್ಷೆಯನ್ನು, 1 ಲಕ್ಷ ರೂ. ದಂಡವನ್ನು ವಿಧಿಸಿದೆ. 1 ಲಕ್ಷ ದಂಡದಲ್ಲಿ ಆರೋಪಿ ಮತ್ತು ಹತ್ಯೆಯಾದ ಹರೀಶ್ ನಾಯ್ಕರ ಪುತ್ರಿಗೆ 98 ಸಾವಿರ ರೂ.ನ್ನು ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಅಲ್ಲದೆ ಹರೀಶ್ ನಾಯ್ಕಾರ ಪುತ್ರಿಯು ಸಂತ್ರಸ್ತರ ಪರಿಹಾರ ನಿಧಿಯಿಂದ ಪರಿಹಾರ ಪಡೆದುಕೊಳ್ಳಲು ಅರ್ಹಳೆಂದು ತೀರ್ಪಿತ್ತಿದೆ.

ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಪುಷ್ಪರಾಜ್ ಅಡ್ಯಂತಾಯ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News