ಜಿಲ್ಲೆಯ ನದಿಗಳಿಗೆ ಅಲ್ಲಲ್ಲಿ ಚೆಕ್ ಡ್ಯಾಂಗಳು ನಿರ್ಮಾಣವಾಗಲಿ: ಸಚಿವ ರೈ

Update: 2016-08-23 12:47 GMT

ಮಂಗಳೂರು, ಆ.23: ದಕ್ಷಿಣ ಕನ್ನಡ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಲ್ಲಿ ಪಶ್ಚಿಮ ವಾಹಿನಿ ಯೋಜನೆ ಅನುಷ್ಠಾನಗೊಳಿಸುವ ಜತೆಯಲ್ಲೇ ಜಿಲ್ಲೆಯಲ್ಲಿರುವ ಎಲ್ಲಾ ನದಿಗಳಿಗೆ ಅಲ್ಲಲ್ಲಿ ಕಿಂಡಿಅಣೆಕಟ್ಟುಗಳನ್ನು ನಿರ್ಮಿಸುವ ಕಾರ್ಯ ಆಗಬೇಕು. ಆ ಮೂಲಕ ನೀರಿನ ಸಂರಕ್ಷಣೆ ಹಾಗೂ ಅಂತರ್ಜಲ ಹೆಚ್ಚಿಸಲು ಸಾಧ್ಯ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ವಿವಿಧ ಇಲಾಖೆಗಳ ಅಭಿವೃದ್ದಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತ್ತಾ, ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮಗಳಾಗಬೇಕು ಎಂದರು.

ನೇತ್ರಾವತಿ ಸೇರಿದಂತೆ ಜಿಲ್ಲೆಯಲ್ಲಿರುವ ಎಲ್ಲಾ ನದಿಗಳಿಗೆ ಕನಿಷ್ಠ ತಲಾ 25ರಿಂದ 30ರಷ್ಟು ಕಿಂಡಿ ಅಣೆಕಟ್ಟುಗಳು (ಚೆಕ್ ಡ್ಯಾಂಗಳು) ನಿರ್ಮಾಣವಾಗಬೇಕು. ಈ ಬಗ್ಗೆ ಕ್ರಮಗಳನ್ನು ಕೈಗೊಳ್ಳಿ ಎಂದು ಅವರು ಹೇಳಿದರು.

ಅಂಬೇಡ್ಕರ್ ಭವನದ ಡಿಪಿಆರ್ ಸಿದ್ಧ

ಉರ್ವಸ್ಟೋರ್ ಬಳಿಯ 1.61 ಎಕರೆ ಪ್ರದೇಶದಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಜಿಲ್ಲಾ ಮಟ್ಟದ ಅಂಬೇಡ್ಕರ್ ಭವನದ ಕಟ್ಟಡ ಕಾಮಗಾರಿಗೆ ಸಂಬಂಧಿಸಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಗೊಂಡಿದೆ. ಭವನ ನಿರ್ಮಾಣಕ್ಕೆ ಸಂಬಂಧಿಸಿ 4.90 ಕೋಟಿ ರೂ. ಇಲಾಖೆಯ ಖಾತೆಯಲ್ಲಿದೆ ಎಂದು ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಡಾ. ಸಂತೋಷ್ ಕುಮಾರ್ ಮಾಹಿತಿ ನೀಡಿದರು.

ಜಾಗದ ಸಮಸ್ಯೆಯಿಂದಾಗಿ ಜಿಲ್ಲಾ ಮಟ್ಟದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಹಿನ್ನಡೆಯಾಗಿತ್ತು. ಇದೀಗ ಸಚಿವ ಸಂಪುಟದಲ್ಲಿ ಅನುಮೋದನೆ ದೊರಕಿದ್ದು, ಕಟ್ಟಡ ಕಾಮಗಾರಿ ಶೀಘ್ರವೇ ಆರಂಭಗೊಂಡು ಪೂರ್ಣಗೊಳ್ಳಬೇಕು ಎಂದು ಸಚಿವ ರೈ ತಾಕೀತು ಮಾಡಿದರು.

ಬೀಚ್ ಅಭಿವೃದ್ಧಿ ಕಾಮಗಾರಿ 1 ತಿಂಗಳಲ್ಲಿ ಆರಂಭಿಸಲು ಡಿಸಿ ನಿರ್ದೇಶನ

ಪ್ರವಾಸೋದ್ಯಮ ಇಲಾಖೆಯಡಿ ಜಿಲ್ಲೆಯ ಸಮುದ್ರ ತೀರಗಳ ಅಭಿವೃದ್ದಿಗೆ ಸಂಬಂಧಿಸಿ ಯೋಜನೆ ರೂಪಿಸಲಾಗಿದೆ. ಅದರಂತೆ ಸೋಮೇಶ್ವರ ಬೀಚ್‌ಗೆ 3.33 ಕೋಟಿ ರೂ., ಉಳ್ಳಾಲ ಬೀಚ್‌ಗೆ 1.89 ಕೋಟಿರೂ., ಸುರತ್ಕಲ್‌ಗೆ 2.35 ಕೋಟಿ ರೂ., ತಲಪಾಡಿಗೆ 3.25 ಕೋಟಿ ರೂ., ಸುಲ್ತಾನ್ ಬತ್ತೇರಿಗೆ 2.63 ಕೋಟಿ ರೂ. ಸೇರಿದಂತೆ ಒಟ್ಟು 13.72 ಕೋಟಿ ರೂ.ಗಳ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಪ್ರವಾಸೋದ್ಯಮ ಅಧಿಕಾರಿ ಸಭೆಯಲ್ಲಿ ಮಾಹಿತಿ ನೀಡಿದರು.

ಕಾಮಗಾರಿ ವಿಳಂಬವಾಗುತ್ತಿದೆ ಎಂದು ಸಚಿವ ರೈ ಸಭೆಯಲ್ಲಿ ಆಕ್ಷೇಪಿಸಿದಾಗ, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಪ್ರತಿಕ್ರಿಯಿಸಿ, ಸಮಗ್ರ ಯೋಜನೆಯನ್ನು ಸಿದ್ಧಪಡಿಸಿ ರಾಜ್ಯ ಸರಕಾರಕ್ಕೆ ಪ್ರವಾಸೋದ್ಯಮ ಇಲಾಖೆ ವತಿಯಿಂದ ಕಳುಹಿಸಲಾಗಿದ್ದ ಪ್ರಸ್ತಾವನೆಯನ್ನು ತಾಂತ್ರಿಕ ಹಿನ್ನೆಲೆಯಲ್ಲಿ ವಾಪಸು ಕಳುಹಿಸಲಾಗಿತ್ತು. ಜಿಲ್ಲಾಧಿಕಾರಿ ಗಮನಕ್ಕೆ ತಾರದೆ ಇಲಾಖೆಯು ಆ ತಪಾಲನ್ನು ಇಲಾಖೆ ತಮ್ಮಲ್ಲಿಯೇ ಇರಿಸಿಕೊಂಡಿತ್ತು. ಅದನ್ನು ಜಿಲ್ಲಾಧಿಕಾರಿಯವರು ತರಿಸಿಕೊಂಡು ಪ್ರಸ್ತಾವನೆಯನ್ನು ಸರಿಪಡಿಸಿ ಮತ್ತೆ ಸರಕಾರಕ್ಕೆ ಕಳುಹಿಸಿ ಒಪ್ಪಿಗೆ ಪಡೆದುಕೊಂಡಿದೆ ಎಂದು ವಿವರ ನೀಡಿದರು. ಈ ಸಂದರ್ಭ ಜಿಲ್ಲಾಧಿಕಾರಿ ಕೆ.ಜಿ. ಜಗದೀಶ್ ಮಾತನಾಡಿ, ಒಂದು ತಿಂಗಳಲ್ಲಿ ಕಾಮಗಾರಿ ಆರಂಭಿಸಬೇಕೆಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಗಡುವು ನೀಡಿದರು.

ಸಭೆಯಲ್ಲಿ ಶಾಸಕ ಜೆ.ಆರ್. ಲೋಬೊ, ಮೇಯರ್ ಹರಿನಾಥ್, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಸನಿಲ್, ಅಪ್ಪಿಲತಾ, ಲ್ಯಾನ್ಸಿಲಾಟ್ ಪಿಂಟೋ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಉಮೇಶ್, ಮನಪಾ ಆಯುಕ್ತ ಮುಹಮ್ಮದ್ ನಝೀರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News