ಕನ್ನಡ ಸಾಹಿತ್ಯ ಪರಿಷತ್‌ಗೆ ಯುವ ಸದಸ್ಯರ ಸೇರ್ಪಡೆಯ ಅಗತ್ಯವಿದೆ: ಏರ್ಯ ಲಕ್ಷ್ಮೀನಾರಾಯಣ ಆಳ್ವ

Update: 2016-08-23 12:24 GMT

ಬಂಟ್ವಾಳ, ಆ. 23: ಕನ್ನಡ ಏಕೀಕರಣದ ಬಳಿಕ ಅಧಿಕಾರ ವಿಕೇಂದ್ರೀಕರಣಗೊಂಡು ಕನ್ನಡ ಸಾಹಿತ್ಯ ಪರಿಷತ್ ವಿಸ್ತಾರವಾಗಿ ಬೆಳೆಯುತ್ತಿದ್ದು, ಶಾಲಾ ಕಾಲೇಜಿನ ಮೂಲಕ ಕನ್ನಡಾಸಕ್ತರನ್ನು ಸೆಳೆದು ಯುವ ಸದಸ್ಯರ ಸೇರ್ಪಡೆಗೊಳಿಸುವ ಅಗತ್ಯತೆ ಇದೆ ಎಂದು ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಹೇಳಿದ್ದಾರೆ.

ಬಂಟ್ವಾಳ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮೊಡಂಕಾಪು ದೀಪಿಕಾ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಪದಗ್ರಹಣ ಮತ್ತು ಪಂಜೆ ಮಂಗೇಶರಾವ್ ಸಂಸ್ಮರಣೆ ಬಳಿಕ ನಡೆದ ತಾಲೂಕು ಮಟ್ಟದ ಸದಸ್ಯರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಬಂಟ್ವಾಳ ಕಸಾಪ ನೂತನ ಅಧ್ಯಕ್ಷ ಕೆ.ಮೋಹನ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಬಿ.ಸಿ.ರೋಡಿನಲ್ಲಿ ಮೀಸಲಿಟ್ಟ ಸರಕಾರಿ ಜಮೀನಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾರ್ಗದರ್ಶನದಲ್ಲಿ ’ಕನ್ನಡ ಭವನ’ ನಿರ್ಮಿಸುವ ಮಹತ್ತರ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಕಳ ಸಾಹಿತ್ಯ ಸಂಘದ ಸಂಚಾಲಕ ಪ್ರೊ. ಎಂ.ರಾಮಚಂದ್ರ ದಿಕ್ಸೂಚಿ ಭಾಷಣ ಮಾಡಿದರು. ಅವಿಭಜಿತ ಜಿಲ್ಲೆಯ ಕಾರ್ಕಳದಲ್ಲಿ ಕಳೆದ 1971ರಲ್ಲಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವು ಕಡಿಮೆ ಖರ್ಚಿನಲ್ಲಿ ಗರಿಷ್ಠ ಮಂದಿ ಪಾಲ್ಗೊಳ್ಳುವ ಮೂಲಕ ನಡೆದಿದ್ದು, ಇದೀಗ ಸಾಹಿತ್ಯ ಮಂಟಪಕ್ಕಿಂತ ಭೋಜನ ಮಂಟಪದಲ್ಲಿ ಜನ ಸೇರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ ಎಂದರು. ಇದಕ್ಕಾಗಿ ಶೋತೃಗಳ ಬಗ್ಗೆ ಗಮನ ಹರಿಸುವ ಬದಲಾಗಿ ವಿವಿಧ ಕ್ಷೇತ್ರಗಳ ಪಂಡಿತರನ್ನು ಕರೆಸಿ ಕೃತಿ ಚರ್ಚೆ ನಡೆಸಬೇಕು. ಮಾತ್ರವಲ್ಲದೆ ಜನಸಾಮಾನ್ಯರನ್ನು ಕೂಡಾ ಸೇರಿಸಿಕೊಂಡು ಪರಸ್ಪರ ಸಂವಾದ, ಉಪನ್ಯಾಸ, ಕಾವ್ಯವಾಚನ, ವಿದ್ಯಾರ್ಥಿಗಳಿಗೆ ಕಥೆ, ಕವನ ಸ್ಪರ್ಧೆ ಮತ್ತಿತರ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಶೋತೃಗಳು ತಾವಾಗಿಯೇ ಪಾಲ್ಗೊಳ್ಳುತ್ತಾರೆ ಎಂದು ಸಲಹೆ ನೀಡಿದರು.

ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕ ಡಾ. ಯೋಗೀಶ ಕೈರೋಡಿ ಮತ್ತಿತರರು ಸಲಹೆ ಸೂಚನೆ ನೀಡಿದರು. ಕಸಾಪ ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ ಮತ್ತಿತರರು ಇದ್ದರು.

ಕನ್ನಡ ಭವನ ನಿರ್ಮಾಣ ಸಮಿತಿ ಸಂಚಾಲಕ ಕೊಳಕೆ ಗಂಗಾಧರ ಭಟ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ, ವಕೀಲ ರವೀಂದ್ರ ಕುಕ್ಕಾಜೆ ವಂದಿಸಿದರು. ಕೋಶಾಧಿಕಾರಿ, ಪ್ರಾಂಶುಪಾಲ ಡಾ. ಗಿರೀಶ ಭಟ್ ಅಜೆಕ್ಕಳ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News