ಮಣಿನಾಲ್ಕೂರು-ಸರಪಾಡಿ ಗ್ರಾಮಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಸಚಿವ ರೈ

Update: 2016-08-23 13:00 GMT

ಬಂಟ್ವಾಳ, ಆ. 23: ಸರ್ವ ಧರ್ಮೀಯರ ಧಾರ್ಮಿಕ ಕೇಂದ್ರಗಳನ್ನು ಒಳಗೊಂಡಿರುವ ಮಣಿನಾಲ್ಕೂರು-ಸರಪಾಡಿ ಗ್ರಾಮ ಸುಂದರ, ಸೌಹಾರ್ದದ ತಾಣವಾಗಿದ್ದು ಇಲ್ಲಿಯ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ರಾಜ್ಯ ಅರಣ್ಯ ಹಾಗೂ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಸರಪಾಡಿ ಗ್ರಾಮದ ಹೊಳ್ಳರಗುತ್ತು ಮನೆಯಲ್ಲಿ ಶನಿವಾರ ಮಧ್ಯಾಹ್ನ ನಡೆದ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದ ವಿವಿಧ ರಸ್ತೆಗಳ ಅಭಿವೃದ್ಧಿ ಹಾಗೂ ಶಾಲೆ-ಕಾಲೇಜುಗಳ ನಿರ್ಮಾಣಕ್ಕೆ ಈಗಾಗಲೇ ಅನುದಾನ ಒದಗಿಸಲಾಗಿದೆ. 32 ಕೋಟಿ ರೂ. ವೆಚ್ಚದ ಅಜಿಲಮೊಗರು-ಕಡೇಶ್ವಲ್ಯ ಸೇತುವೆ ನಿರ್ಮಾಣವಾದಲ್ಲಿ ಸರಪಾಡಿಗೆ ಹೆಬ್ಬಾಗಿಲು ತೆರೆದಂತಾಗುತ್ತದೆ ಎಂದರು.

ಸಮಾರಂಭದಲ್ಲಿ ಸಚಿವ ರಮಾನಾಥ ರೈ, ಸರಪಾಡಿ ಜಿಲ್ಲಾ ಪಂಚಾಯತ್ ಸದಸ್ಯ ಪದ್ಮಶೇಖರ ಜೈನ್, ಸರಪಾಡಿ ತಾಲೂಕು ಪಂಚಾಯತ್ ಸದಸ್ಯೆ ಸ್ವಪ್ನ ವಿಶ್ವನಾಥ ಪೂಜಾರಿ, ಹಿರಿಯರಾದ ವೇದಮೂರ್ತಿ ಸುಬ್ರಾಯ ಐತಾಳರು ಅರಮನೆಯವರನ್ನು ಹೊಳ್ಳರಗುತ್ತು ಮನೆಯವರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಸಚಿವ ರಮಾನಾಥ ರೈ ಹೊಳ್ಳರಗುತ್ತು ಮನೆಯವರನ್ನು ಕಾಂಗ್ರೆಸ್ ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಬರ ಮಾಡಿಕೊಂಡರು.

ಗುತ್ತಿನ ಚಂದ್ರಹಾಸ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಂಟ್ವಾಳ ತಾಲೂಕು ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ ಮಾತನಾಡಿ, ಸರಪಾಡಿ-ಮಣಿನಾಲ್ಕೂರು ವ್ಯಾಪ್ತಿಯಲ್ಲಿ ಸಚಿವ ರಮಾನಾಥ ರೈಯವರ ಮುತುವರ್ಜಿಯಿಂದ ನಡೆದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲಿಯನ್, ಸರಪಾಡಿ ಗ್ರಾಪಂ ಅಧ್ಯಕ್ಷೆ ಲೀಲಾವತಿ ಧರ್ಣಪ್ಪ ಪೂಜಾರಿ, ಸದಸ್ಯರಾದ ಪ್ರೇಮ, ನಾರಾಯಣಪ್ಪ, ಮಣಿನಾಲ್ಕೂರು ಗ್ರಾಪಂ ಅಧ್ಯಕ್ಷೆ ಗೀತಾ ಶ್ರೀಧರ ಪೂಜಾರಿ, ಉಪಾಧ್ಯಕ್ಷ ದಿನೇಶ್, ಸದಸ್ಯರಾದ ಆದಂ ಕುಂಞಿ, ಡೆರಿಸ್ ಮೊರೆಸ್, ಹೊಳ್ಳರಗುತ್ತು ಕುಟುಂಬದ ಹಿರಿಯರಾದ ಸುಂದರ ಶೆಟ್ಟಿ, ಬೆಂಗಳೂರು ಉದ್ಯಮಿ ವಿಠಲ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗುತ್ತಿನ ನಾರಾಯಣ ಶೆಟ್ಟಿ ಸ್ವಾಗತಿಸಿದರು. ಸರಪಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಿಚಾರ್ಡ್ ಡಿಸೋಜ ವಂದಿಸಿದರು. ಸರಪಾಡಿ ಗ್ರಾಪಂ ಸದಸ್ಯ ದನಂಜಯ ಶೆಟ್ಟಿ ಸರಪಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News