ಪಠ್ಯೇತರ ಚಟುವಟಿಕೆಗಳಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಧೈರ್ಯ: ಶಾಹುಲ್ ಹಮೀದ್
ಬೆಳ್ತಂಗಡಿ, ಆ.23: ಎಲ್ಲಾ ಮಕ್ಕಳೂ ಸಾಧನೆ ಮಾಡಲು ಅರ್ಹರಾಗಿರುತ್ತಾರೆ. ಅವರಲ್ಲಿರುವ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯ ನಡೆಯಬೇಕಾಗಿದೆ. ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಧೈರ್ಯ ಮೂಡುತ್ತದೆ ಎಂದು ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್ ಹೇಳಿದರು.
ವೇಣೂರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ(ಪ್ರೌಢಶಾಲಾ ವಿಭಾಗ) ನಡೆದ ಬೆಳ್ತಂಗಡಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಎಂಬುದು ಕೇವಲ ನಾಲ್ಕು ಗೋಡೆಗಳ ಮಧ್ಯೆ ಮಾತ್ರ ಇರುವಂತಹದ್ದಲ್ಲ. ವಿದ್ಯಾರ್ಥಿ ದೆಸೆಯಲ್ಲಿ ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆಗಳಲ್ಲಿ ಮತ್ತು ಪ್ರತಿಭಾ ಕಾರಂಜಿಯಂತಹ ಸ್ಪರ್ಧೆಗಳನ್ನು ಆಯೋಜಿಸುವುದರಿಂದ ಸಾಧನೆಗೆ ಪ್ರೋತ್ಸಾಹ ದೊರೆಯುತ್ತದಲ್ಲದೆ ನಮ್ಮ ಕಲೆ ಸಂಸ್ಕೃತಿಯನ್ನು ಬೆಳೆಸಿದಂತಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ವೇಣೂರು ಗ್ರಾ.ಪಂ. ಅಧ್ಯಕ್ಷೆ ಮೋಹಿನಿ ವಿ. ಶೆಟ್ಟಿ ವಹಿಸಿದ್ದರು. ಜಿ.ಪಂ. ಸದಸ್ಯರಾದ ಶೇಖರ್ ಕುಕ್ಕೇಡಿ, ಧರಣೇಂದ್ರ ಕುಮಾರ್, ಮಾತನಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಅರುಣ್ ಕ್ರಾಸ್ತಾ, ಉದ್ಯಮಿಗಳಾದ ಲಾರೆನ್ಸ್ ಲೋಬೊ, ಜಿನರಾಜ ಜೈನ್, ಕಾಲೇಜಿನ ಪ್ರಾಚಾರ್ಯ ಚಂದ್ರು, ವಿದ್ಯೋದಯ ಶಿಕ್ಷಣ ಸಂಸ್ಥೆಯ ಸಂಚಾಲಕ ಶಿವರಾಮ ಹೆಗ್ಡೆ, ನೋಡಲ್ ಅಧಿಕಾರಿ ರಾಧಾಕೃಷ್ಣ ಭಟ್, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ರಮೇಶ್ ಮಯ್ಯ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಅಜಿತ್‌ಕುಮಾರ್ ಕೊಕ್ರಾಡಿ, ಅನುದಾನಿತ ಪ್ರಾ.ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷೆ ಶೀಲಾ ಎಸ್.ಹೆಗ್ಡೆ, ಸಹಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಸತೀಶ್ ಉಪಸ್ಥಿತರಿದ್ದರು.
ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಸ್ವಾಗತಿಸಿದರು. ನೋಡೆಲ್ ಅಧಿಕಾರಿ ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಪ್ರಾಚಾರ್ಯ ಸುಕೇಶ್ ಕೆ. ಸ್ಪರ್ಧೆಗಳ ವಿವರ ನೀಡಿದರು.
ಶಿಕ್ಷಕರಾದ ಶರತ್ ತುಳುಪುಳೆ ಹಾಗೂ ಜ್ಯೋತಿ ಜ್ಯೂಲಿಯಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಪೂರ್ಣಿಮಾ ವಂದಿಸಿದರು. ಪ್ರಾಥಮಿಕ, ಪ್ರೌಢಶಾಲಾ, ಪದವಿಪೂರ್ವ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ 78 ಸ್ಪರ್ಧೆಗಳನ್ನು ನಡೆಸಲಾಯಿತು. ಸುಮಾರು 3,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.