×
Ad

ಗುಜರಾತ್ ರ‍್ಯಾಲಿ:ಕಾಂಗ್ರೆಸ್ ನಾಯಕರು ಸೇರಿದಂತೆ 400 ಜನರ ಬಂಧನ

Update: 2016-08-23 20:29 IST

ಗಾಂಧಿನಗರ,ಆ.23: ಕಾಂಗ್ರೆಸ್‌ನ ‘ಜನಾಕ್ರೋಶ ರ‍್ಯಾಲಿ’ಯ ಅಂಗವಾಗಿ ಇಂದಿಲ್ಲಿ ರಾಜ್ಯ ವಿಧಾನಸಭೆಗೆ ಜಾಥಾದಲ್ಲಿ ತೆರಳುತ್ತಿದ್ದ ಪಕ್ಷದ ಸುಮಾರು 400 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದು, ಈ ಪೈಕಿ ಹಿರಿಯ ನಾಯಕರೂ ಸೇರಿದ್ದಾರೆ.
ಬಂಧಿತರಲ್ಲಿ ಪ್ರತಿಪಕ್ಷ ನಾಯಕ ಶಂಕರಸಿಂಹ ವೇಲಾ,ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಭರತಸಿಂಹ ಸೋಲಂಕಿ,ಹಿರಿಯ ನಾಯಕರಾದ ಶಕ್ತಿಸಿಂಹ ಗೋಹಿಲ್,ಸಿದ್ಧಾರ್ಥ ಪಟೇಲ್,ರಾಜ್ಯಸಭಾ ಸದಸ್ಯ ಮಧುಸೂದನ ಮಿಸ್ತ್ರಿ ಮತ್ತು ಸುಮಾರು 20 ಶಾಸಕರು ಸೇರಿದ್ದರು.
ಬಿಜೆಪಿಯ ದಮನಕಾರಿ ನೀತಿ ಮತ್ತು ದಲಿತರ ಮೇಲಿನ ದೌರ್ಜನ್ಯಗಳನ್ನು ವಿರೋಧಿಸಿ ರ್ಯಾಲಿಗಾಗಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಗಾಂಧಿನಗರದಲ್ಲಿ ಜಮಾಯಿಸಿದ್ದರು.
ಪ್ರತಿಭಟನಾಕಾರರು ಮಳೆಗಾಲದ ಅಧಿವೇಶನ ನಡೆಯುತ್ತಿದ್ದ ವಿಧಾನಸಭೆಯ ಪ್ರವೇಶದ್ವಾರವನ್ನು ತಲುಪಿದಾಗ ಪೊಲೀಸರು ಅವರನ್ನು ತಡೆಯಲು ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಪ್ರತಿಭಟನಾಕಾರರು ಬಲವಂತದಿಂದ ಒಳಗೆ ನುಗ್ಗಲು ಪ್ರಯತ್ನಿಸಿದಾಗ ಪೊಲೀಸರು ಅವರನ್ನು ತಡೆಯಲು ಜಲಫಿರಂಗಿಗಳನ್ನು ಬಳಸಿದರು. ಪ್ರತಿಭಟನಾಕಾರರನ್ನು ಬಂಧಿಸಿ,ಬಳಿಕ ಬಿಡುಗಡೆಗೊಳಿಸಿದರು.
ಬಿಡುಗಡೆಯ ಬಳಿಕ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಭರತಸಿಂಹ ಸೋಲಂಕಿ ಅವರು ರಾಜ್ಯದಲ್ಲಿಯ ಬಿಜೆಪಿ ಸರಕಾರದ ವಿರುದ್ಧ ದಾಳಿನಡೆಸಿದರು. ಸರಕಾರವು ಹೊಣೆಗೇಡಿತನವನ್ನು ಪ್ರದರ್ಶಿಸುತ್ತಿದ್ದು ಜನತೆಯ ವಿರುದ್ಧ ದಮನಕಾರಿ ನೀತಿಯನ್ನು ಅನುಸರಿಸುತ್ತಿದೆ ಎಂದು ಅವರು ಆಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News