×
Ad

'ರಮ್ಯಾ ಪಾಕಿಸ್ತಾನವನ್ನು ಶ್ಲಾಘಿಸಿದ್ದು ತಪ್ಪಾದರೆ ಮೋದಿಯವರು ನವಾಝ್ ಶರೀಫ್‌ರ ತಾಯಿಗೆ ಸೀರೆ ನೀಡಿರುವುದೂ ತಪ್ಪು'

Update: 2016-08-23 20:56 IST

ಪುತ್ತೂರು, ಆ.23: ಪಾಕಿಸ್ತಾನದಲ್ಲಿ ತನಗೆ ಉತ್ತಮ ಆತಿಥ್ಯ ಸಿಕ್ಕಿದ್ದನ್ನು ಚಿತ್ರನಟಿ ರಮ್ಯಾ ಅವರು ಶ್ಲಾಘಿಸಿದ್ದೇ ಮಹಾ ಅಪರಾಧ ಎಂದು ಬಿಂಬಿಸುತ್ತಿರುವ ಬಿಜೆಪಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಮಂತ್ರಣವಿಲ್ಲದೆ ಪಾಕಿಸ್ತಾನಕ್ಕೆ ತೆರಳಿ ನವಾಝ್ ಶರೀಫ್‌ರ ತಾಯಿಗೆ ಸೀರೆ ಕೊಟ್ಟು ಬಂದಿರುವುದು , ಪಾಕಿಸ್ತಾನದ ಆತಿಥ್ಯ ಸ್ವೀಕರಿಸಿರುವುದು ತಪ್ಪಾಗಿ ಕಾಣಿಸಿಲ್ಲವೇ?, ಅದು ಅಪರಾಧವಲ್ಲವೇ ಎಂದು ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷೆ ದಿವ್ಯಪ್ರಭಾ ಗೌಡ ಚಿಲ್ತಡ್ಕ ಆರೋಪಿಸಿದ್ದಾರೆ.

ಪುತ್ತೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಮ್ಯಾ ಪಾಕಿಸ್ತಾನಕ್ಕೆ ಹೋಗಿದ್ದಾಗ ಅಲ್ಲಿನ ಜನರು ನೀಡಿದ ಆತಿಥ್ಯ ಮತ್ತು ಸ್ನೇಹಪರ ಸ್ವಾಗತವನ್ನು ಉಲ್ಲೇಖಿಸಿ ಅಲ್ಲಿನ ಜನರು ಒಳ್ಳೆಯವರು ಎಂದು ಹೇಳಿರುವುದನ್ನು ಘೋರ ಅಪರಾಧ ಎಂದು ಬಿಜೆಪಿಗರು ಬಿಂಬಿಸುತ್ತಿದ್ದಾರೆ. ರಮ್ಯಾರ ಮಾತಿನ ಕುರಿತು ಭಾರೀ ವಿವಾದ ಎಬ್ಬಿಸುತ್ತಿರುವ ಬಿಜೆಪಿ ಮತ್ತು ಸಂಘ ಪರಿವಾರದವರು ತಮ್ಮದೇ ಪಕ್ಷದ ನಾಯಕರ ನಡವಳಿಕೆಗಳನ್ನು ಮೊದಲು ಗಮನಿಸಲಿ. ಹಿಂದೆ ಪ್ರಧಾನಿಯಾಗಿದ್ದ ವಾಜಪೇಯಿ ಅವರು ಪಾಕಿಸ್ತಾನಕ್ಕೆ ಬಸ್ ಯಾತ್ರೆ ಕೈಗೊಂಡರು. ಪಾಕಿಸ್ತಾನದ ಮೇಲೆ ಅಷ್ಟೊಂದು ದ್ವೇಷ ಇರುವಾಗ ಅವರು ಯಾಕೆ ಹೋಗಬೇಕಿತ್ತು?, ಮಾಜಿ ಉಪಪ್ರಧಾನಿ ಎಲ್.ಕೆ. ಆಡ್ವಾಣಿ ಅವರು ಮಹಮ್ಮದ್ ಆಲಿ ಜಿನ್ನಾರನ್ನು ಹೊಗಳಿದ್ದರು. ಇದು ಬಿಜೆಪಿಗರಿಗೆ ನೆನಪಿಲ್ಲವೇ ಎಂದು ಅವರು ಕೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ಪ್ರಧಾನಿಯ ಮೊಮ್ಮಗಳ ಮದುವೆಗೆ ಆಮಂತ್ರಣವಿಲ್ಲದೆ ಹೋಗಿ ಬಂದಿದ್ದಾರೆ. ನವಾಝ್ ಶರೀಫ್ ಅವರಿಗೆ ಹುಟ್ಟು ಹಬ್ಬದ ಶುಭಾಷಯ ಕೋರಿ ಬಂದಿದ್ದಾರೆ. ಅಷ್ಟು ಮಾತ್ರವಲ್ಲ ಅವರ ತಾಯಿಗೆ ಸೀರೆ ಕೊಟ್ಟಿದ್ದಾರೆ. ಪಾಕಿಸ್ತಾನ ನರಕ ಎಂದು ಹೇಳುವವರು ಯಾಕೆ ಇದನ್ನೆಲ್ಲ ಮಾಡಬೇಕಿತ್ತು?, ಅವರ ಪ್ರಕಾರ ಅಪರಾಧವಲ್ಲವೇ? ಕೇಂದ್ರ ಸಚಿವ ಮನೋಹರ ಪರಿಕ್ಕರ್, ರಾಜ್ಯ ಬಿಜೆಪಿ ನಾಯಕ ಪ್ರಹ್ಲಾದ್ ಜೋಷಿ ಮೊದಲಾದವರು ಪಾಕಿಸ್ತಾನವನ್ನು ನರಕ ಎಂದು ಬಣ್ಣಿಸುತ್ತಾರೆ. ಅದು ನರಕ ಹೌದು ಎಂದಾದರೆ ರಾಜನಾಥ್ ಸಿಂಗ್ ಅವರು ಯಾಕೆ ಪಾಕಿಸ್ತಾನಕ್ಕೆ ಹೋಗಬೇಕು? ಪಾಕಿಸ್ತಾನದ ನಾಯಕರು ಮೋದಿ ಅವರಿಗೆ ಕಳುಹಿಸಿದ ಮಾವಿನ ಹಣ್ಣಿನ ಪ್ಯಾಕನ್ನು ಯಾಕೆ ಸ್ವೀಕರಿಸಬೇಕಿತ್ತು ಎಂದು ಪ್ರಶ್ನಿಸಿದರು.

ಬೆಂಗಳೂರಿನಲ್ಲಿ ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಸಂಸ್ಥೆ ನಡೆಸಿದ ಕಾರ್ಯಕ್ರಮದಲ್ಲಿ ದೇಶದ್ರೋಹದ ಘೋಷಣೆ ಕೂಗಲಾಗಿದೆ ಎಂಬ ಆರೋಪದ ಮೇಲೆ ತನಿಖೆ ನಡೆಯುತ್ತಿದ್ದು, ಆ ಬಗ್ಗೆ ಸಮರ್ಥಿಸಲು ನಾವು ಹೋಗುತ್ತಿಲ್ಲ. ಆದರೆ ಬಿಜೆಪಿಗರು ಎಬಿವಿಪಿ ಸಂಘಟನೆಯ ಹೆಸರಿನಲ್ಲಿ ಅಮಾಯಕ ವಿದ್ಯಾರ್ಥಿಗಳ ಮೂಲಕ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ತಂದೆತಾಯಿ ಕಷ್ಟಪಟ್ಟು ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸಿದರೆ , ಆ ಅಮಾಯಕ ಮಕ್ಕಳನ್ನು ಪ್ರಚೋದಿಸಿ ಪ್ರತಿಟನೆ ಹೆಸರಿನಲ್ಲಿ ಹಿಂಸಾಚಾರಕ್ಕೆ ಇಳಿಸುವುದು, ಲಾಠಿ ಏಟು ತಿನ್ನುವಂತೆ ಮಾಡುಲಾಗುತ್ತಿದೆ. ಬಿಜೆಪಿ ನಾಯಕರ,ಸಂಸದರ ಮಕ್ಕಳು ಲಂಡನ್, ಇಂಗ್ಲೆಂಡ್‌ನಲ್ಲಿ ಕಲಿಯುತ್ತಿದ್ದಾರೆಯೇ ಹೊರತು ಯಾರಾದರೂ ಇಂತಹ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿಲ್ಲ ಎಂದ ಅವರು ಅಮಾಯಕ ಮಕ್ಕಳನ್ನು ಪ್ರಚೋಧಿಸಿ ಬಲಿಪಶು ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ನಗರಸಭಾಧ್ಯಕ್ಷೆ ಜಯಂತಿ ಬಲ್ನಾಡು, ಸದಸ್ಯೆ ಜಯಲಕ್ಷ್ಮೀ ಸುರೇಶ್, ಕಾಂಗ್ರೆಸ್ ಮುಖಂಡೆ ಸ್ವರ್ಣಲತಾ ಹೆಗ್ಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News