ಪುತ್ತೂರು ಸಂತೆ ಸ್ಥಳಾಂತರಕ್ಕೆ ಎಸಿ ಆದೇಶವೇ ಕಾರಣ: ಸಿ.ಪಿ. ಜಯರಾಮ ಗೌಡ

Update: 2016-08-23 16:24 GMT

ಪುತ್ತೂರು, ಆ.23: ಪುತ್ತೂರಿನ ಕಿಲ್ಲೆ ಮೈದಾನ ಮತ್ತು ಸುತ್ತಮತ್ತಲಿನ ರಸ್ತೆ ಬದಿಗಳಲ್ಲಿ ಸೋಮವಾರ ನಡೆಯುತ್ತಿದ್ದ ವಾರದ ಸಂತೆಯನ್ನು ಎಪಿಎಂಸಿಗೆ ಸ್ಥಳಾಂತರಿಸಿದ ಪುತ್ತೂರು ಉಪವಿಭಾಗಾಧಿಕಾರಿಗಳ ಕ್ರಮ ಪ್ರಶಂಸನೀಯವಾಗಿದ್ದು, ಸಂತೆ ಸ್ಥಳಾಂತರಕ್ಕೆ ಉಪವಿಭಾಗಾಧಿಕಾರಿಗಳ ಆದೇಶವೇ ಕಾರಣ ಹೊರತು ಬೇರೆ ಯಾರದ್ದೇ ಸಾಧನೆ ಅಲ್ಲ ಎಂದು ಎಪಿಎಂಸಿಯ ಮಾಜಿ ಅಧ್ಯಕ್ಷ ಸಿ.ಪಿ.ಜಯರಾಮ ಗೌಡ ಅವರು ತಿಳಿಸಿದರು.

ಪುತ್ತೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತೆಗಾಗಿಯೇ ಕಿಲ್ಲೆ ಮೈದಾನದ ಮುಂಭಾಗದಲ್ಲಿ ಎಡಿಬಿ ವತಿಯಿಂದ ಸುವ್ಯವಸ್ಥಿತ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಆ ಕಟ್ಟಡವನ್ನು ಕಸಿದುಕೊಂಡು ಹಿಂದಿನ ಪುರಸಭೆಯವರು ಸಂತೆ ವ್ಯಾಪಾರಿಗಳನ್ನು ಬೀದಿಗೆ ತಳ್ಳಿದ್ದಾರೆ ಹೊರತು ವ್ಯಾಪಾರಸ್ಥರನ್ನು ಬೀದಿಗೆ ತಳ್ಳಿದವರು ಉಪವಿಭಾಗಾಧಿಕಾರಿಗಳಲ್ಲ. ಸಂತೆಯನ್ನು ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಿರುವ ವಿಚಾರದಲ್ಲಿ ಉಪವಿಭಾಗಾಧಿಕಾರಿಗಳು ದಿಟ್ಟ ನಿಲುವಿನ ಆದೇಶ ನೀಡಿದ್ದಾರೆ ಎಂದರು.

ರಾಜ್ಯ ಸರಕಾರ ಕೋಟಿಗಟ್ಟಲೆ ಹಣ ಖರ್ಚು ಮಾಡಿ ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮಾರುಕಟ್ಟೆ ಪ್ರಾಂಗಣ ರಚಿಸಿ 2 ದಶಕಗಳೇ ಕಳೆದಿದೆ. ಪುತ್ತೂರು ಎಪಿಎಂಸಿಯ ಪ್ರಥಮ ಚುನಾಯಿತ ಸಮಿತಿಯ ಅಧ್ಯಕ್ಷನಾಗಿ ತಾನು 16 ವರ್ಷಗಳ ಹಿಂದೆ ಎಪಿಎಂಸಿಗೆ ಅಡಿಕೆ ವ್ಯಾಪಾರ ಸ್ಥಳಾಂತರಿಸುವ ಪ್ರಯತ್ನ ನಡೆಸಿದ್ದೆ. ಅಡಿಕೆ ವರ್ತಕರು ಎಪಿಎಂಸಿಗೆ ಬಾರದೆ ಹೈಕೋರ್ಟಿನಿಂದ ಸ್ಥಳಾಂತರಕ್ಕೆ ತಡೆಯಾಜ್ಞೆ ತಂದಿದ್ದ ವೇಳೆ ಕಠಿಣ ಸವಾಲನ್ನು ಎದುರಿಸಿ ಸುಪ್ರೀಂ ಕೋರ್ಟಿನಲ್ಲಿ ವಾದಿಸುವ ಮೂಲಕ ಜಯ ಸಾಧಿಸಿ, ಅಡಿಕೆ ವರ್ತಕರು ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿಯೇ ವ್ಯಾಪಾರ ಮಾಡುವಂತೆ ಮಾಡುವಲ್ಲಿ ನಾವು ಯಶಸ್ವಿಯಾಗಿದ್ದೆವು. ವಾರದ ಸಂತೆಯನ್ನು ಕೂಡ ಸ್ಥಳಾಂತರಿಸುವ ಪ್ರಯತ್ನವನ್ನು ನಾವು ನಡೆಸಿದ್ದೆವು. ಪಟ್ಟದ್ರ ಹಿತಾಸಕ್ತಿಗಳ ವಿರೋಧ ಮತ್ತು ಬೆಂಬಲ ನೀಡುವ ಅಧಿಕಾರಿಗಳು ಇಲ್ಲದ ಕಾರಣ ಅದು ಸಾಧ್ಯವಾಗಿರಲಿಲ್ಲ. ಆದರೆ ಈಗಿನ ಉಪವಿಭಾಗಾಧಿಕಾರಿಗಳಂತಹ ದಕ್ಷ ಅಧಿಕಾರಿ ಆ ವೇಳೆ ಇರುತ್ತಿದ್ದರೆ ಆಗಲೇ ನಾವು ಸಂತೆ ವ್ಯಾಪಾರವನ್ನು ಕೂಡ ಸ್ಥಳಾಂತರ ಮಾಡುವಲ್ಲಿ ಯಶಸ್ವಿಯಾಗುತ್ತಿದ್ದೆವು ಎಂದು ಅವರು ತಿಳಿಸಿದರು.

ಸಂತೆ ಸ್ಥಳಾಂತರ ಎಪಿಎಂಸಿಯ ಈಗಿನ ಅಧ್ಯಕ್ಷರ ಸಾಧನೆಯಲ್ಲ. ಅವರು ಇದು ನಮ್ಮ ಸಾಧನೆ ಎಂದು ಹೇಳಿಕೊಳ್ಳುವುದಿದ್ದರೆ ಅವರ ಊರಾದ ಕಡಬದಲ್ಲಿ ರಸ್ತೆ ಬದಿಗಳಲ್ಲಿ ನಡೆಯುತ್ತಿರುವ ವಾರದ ಸಂತೆಯನ್ನು ಮೊದಲು ಅಲ್ಲಿನ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರ ಮಾಡಿ ತೋರಿಸಬೇಕಿತ್ತು ಎಂದ ಸಿ.ಪಿ.ಜಯರಾಮ ಗೌಡ ಅವರು ಇನ್ನಾದರೂ ಈ ಕೆಲಸವನ್ನು ಮಾಡಲಿ ಎಂದು ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಎಪಿಎಂಸಿ ಮಾಜಿ ಉಪಾಧ್ಯಕ್ಷ ಅಮ್ಮಣ್ಣ ರೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News