ವೈದ್ಯರು, ಔಷಧ ಕಂಪೆನಿಗಳ ಬೇಜವಾಬ್ದಾರಿ
ಮುಂಬೈ, ಆ.23: ವೈದ್ಯರು, ಔಷಧ ಕಂಪೆನಿಗಳ ಬೇಜವಾಬ್ದಾರಿ ಯಿಂದಾಗಿ ಜನಸಾಮಾನ್ಯರು ಔಷಧಗಳ ಅಡ್ಡ ಪರಿಣಾಮಗಳಿಗೆ ಭಾರೀ ಬೆಲೆ ತೆರುತ್ತಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.
ಬಹುತೇಕ ಯಾವ ವೈದ್ಯರೂ ರೋಗಿಗಳಿಗೆ ಔಷಧ ಚೀಟಿ ನೀಡುವಾಗ, ಅದರ ಅಡ್ಡಪರಿಣಾಮಗಳ ಬಗ್ಗೆ ಮಾಹಿತಿ ನೀಡುವುದಿಲ್ಲ. ಔಷಧಿಯ ಪ್ಯಾಕೇಟ್‌ನಲ್ಲೂ ಬಳಕೆ ಮಾರ್ಗಸೂಚಿ ಅಥವಾ ಅದರಿಂದ ಉಂಟಾಗಬಹುದಾದ ಅಡ್ಡ ಪರಿಣಾಮಗಳ ಬಗ್ಗೆ ಮಾಹಿತಿ ಇರುವುದಿಲ್ಲ.
ಇಲ್ಲೊಂದು ಉದಾಹರಣೆ ಇದೆ ನೋಡಿ. 10 ವರ್ಷದ ರುಚಿ ಎಂಬ ಬಾಲಕಿಯನ್ನು ಇಎನ್‌ಟಿ ವೈದ್ಯರ ಬಳಿಗೆ ಕರೆದೊಯ್ಯಲಾಯಿತು. ವೈದ್ಯರು ಸಿಪ್ರೊಫ್ಲೋಕ್ಸಾಸಿನ್ ಎಂಬ ಮಾತ್ರೆ ಬರೆದುಕೊಟ್ಟರು. ಇದರ ಅಡ್ಡ ಪರಿಣಾಮಗಳ ಬಗ್ಗೆ ಯಾವ ಮಾಹಿತಿಯನ್ನೂ ನೀಡಲಿಲ್ಲ. ಔಷಧಿ ಪ್ಯಾಕೇಟ್‌ನಲ್ಲೂ ಬಳಕೆ ಮಾರ್ಗಸೂಚಿ ಇರಲಿಲ್ಲ. ಸತತ 15 ದಿನಗಳ ಕಾಲ ಅದನ್ನು ಸೇವಿಸಿದ ಬಳಿಕ ರುಚಿಗೆ ತೀವ್ರ ಸ್ವರೂಪದ ಅಸ್ಥಿಪಂಜರಕ್ಕೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಂಡಿತು. ವೈದ್ಯರು ಹಾಗೂ ಔಷಧ ಕಂಪೆನಿಯ ನಿರ್ಲಕ್ಷದಿಂದಾಗಿ ಬಾಲಕಿ ಬಹುತೇಕ ತೆವಳುವ ಹಂತಕ್ಕೆ ಬಂದಿದ್ದಾಳೆ. ಔಷಧಗಳ ಅಡ್ಡಪರಿಣಾಮಗಳಿಂದ ಇಂಥ ಸಮಸ್ಯೆಗೆ ಒಳಗಾಗುವ ಹಲವು ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಲೇ ಇರುತ್ತವೆ. ಔಷಧಗಳ ಬಳಕೆ ವೇಳೆ ಅದರ ಅಡ್ಡ ಪರಿಣಾಮಗಳ ಬಗ್ಗೆ ರೋಗಿಗಳಿಗೆ ಮಾಹಿತಿ ನೀಡುವುದೇ ಇಲ್ಲ ಎಂದು ಎಂಐಎಂಎಸ್ ವೈದ್ಯಕೀಯ ನಿಯತಕಾಲಿಕದ ಸಂಪಾದಕ ಸಿ.ಎಂ.ಗುಲ್ಹಾತಿ ಹೇಳುತ್ತಾರೆ.
ಕೆಲ ನೋವು ನಿವಾರಕ ಅಥವಾ ಆ್ಯಂಟಿ ಬಯೋಟಿಕ್‌ಗಳನ್ನು ಗರ್ಭಿಣಿಯರಿಗೆ ನೀಡಬಾರದು. ಎದೆಹಾಲು ಉಣಿಸುವ ತಾಯಂದಿರಿಗೆ ಕೆಲ ಔಷಧ ನೀಡುವುದು ನಿಷಿದ್ಧ. 12 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಬ್ಯಾಕ್ಟೀರಿಯಾ ನಿರೋಧಕ, ಆ್ಯಸಿಡಿಟಿ ನಿವಾರಕ, ಕಫ ಮತ್ತು ನೆಗಡಿಯಂಥ ಕಾಯಿಲೆಗಳಿಗೆ ಕೆಲ ಔಷಧಿಗಳನ್ನು ನೀಡಬಾರದು. ಆದರೆ ಬಹುತೇಕ ವೈದ್ಯರು, ಮಹಿಳೆಯರಿಗೆ ಚಿಕಿತ್ಸೆ ನೀಡುವ ವೇಳೆ ಗರ್ಭಿಣಿಯರೇ ಅಥವಾ ಎದೆಹಾಲು ಉಣಿಸುತ್ತಿದ್ದಾರೆಯೇ ಎಂಬ ಬಗ್ಗೆ ಕೇಳುವುದೇ ಇಲ್ಲ.
ಆದರೆ ಕಂಪೆನಿಗಳು ತಮ್ಮ ತಪ್ಪುಒಪ್ಪಿಕೊಳ್ಳುವುದಿಲ್ಲ. ಸುರಕ್ಷಾ ಕ್ರಮಗಳನ್ನು ವಿವರಿಸುವುದು ಜಾಹೀರಾತು ನೀಡಿದಂತಾಗುತ್ತದೆ ಹಾಗೂ ಡ್ರಗ್ಸ್ ಆ್ಯಂಡ್ ಮ್ಯಾಜಿಕ್ ರೆಮೆಡೀಸ್ ಕಾಯ್ದೆಯ ಉಲ್ಲಂಘನೆಯಾಗುತ್ತದೆ ಎಂದು ಸಮರ್ಥಿಸಿಕೊಳ್ಳುತ್ತಾರೆ. ಆದರೆ ಭಾರತದ ಡಗ್ಸ್ ಕಂಟ್ರೋಲರ್ ಜನರಲ್ ಜಿ.ಎನ್.ಸಿಂಗ್, ರೋಗಿಗಳ ಹಿತದೃಷ್ಟಿಯಿಂದ ಇಂಥ ಮಾಹಿತಿ ನೀಡುವುದು ಕಡ್ಡಾಯ ಎಂದು ಹೇಳುತ್ತಾರೆ.