×
Ad

ರಾಜಕೀಯ ಪರಿಹಾರಕ್ಕೆ ತುರ್ತುಕ್ರಮ ಅಗತ್ಯ

Update: 2016-08-23 23:36 IST

ತಿರುವನಂತಪುರ, ಆ.23: ಕಾಶ್ಮೀರ ಸಮಸ್ಯೆಗೆ ಪರಿಹಾರವೊಂದನ್ನು ಹುಡುಕಲು ತುರ್ತು ಕ್ರಮ ಕೈಗೊಳ್ಳದಿದ್ದಲ್ಲಿ ಅಲ್ಲಿನ ಪರಿಸ್ಥಿತಿ ‘ಸ್ಫೋಟಿಸಬಹುದು’ ಎಂದಿರುವ ಮಾಜಿ ರಕ್ಷಣಾ ಸಚಿವ ಎ.ಕೆ. ಆ್ಯಂಟನಿ, ಕಣಿವೆಗೆ ತಕ್ಷಣವೇ ಸರ್ವಪಕ್ಷ ನಿಯೋಗವೊಂದನ್ನು ಕಳುಹಿಸುವಂತೆ ಆಗ್ರಹಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಕಾಶ್ಮೀರಕ್ಕೆ ಭೇಟಿ ನೀಡಿದ್ದ ಕೇರಳದ ಪತ್ರಕರ್ತರ ಗುಂಪೊಂದು ಬರೆದಿರುವ ಪುಸ್ತಕವೊಂದನ್ನು ಬಿಡುಗಡೆ ಮಾಡುತ್ತಿದ್ದ ಅವರು, ಪರಿಹಾರ ಕಂಡು ಹಿಡಿಯಲು ತುರ್ತು ಕ್ರಮ ಆರಂಭಿಸದಿದ್ದಲ್ಲಿ ಕಾಶ್ಮೀರ ಕಣಿವೆಯ ಪರಿಸ್ಥಿತಿ ಸ್ಫೋಟಗೊಂಡು ನಿಯಂತ್ರಣ ಮೀರಬಹುದು ಎಂದರು.
ಕಾಶ್ಮೀರವೀಗ ಜ್ವಾಲಾಮುಖಿಯಾಗಿದೆ. ಮುಖ್ಯವಾಗಿ ಯುವ ಜನತೆ ಸೇರಿದಂತೆ ಜನರಲ್ಲಿ ಅಪನಂಬಿಕೆ, ಭಯ ಹಾಗೂ ಸಿಟ್ಟು ತುಂಬಿದೆ. ಕೇಂದ್ರ ಸರಕಾರವು ತಕ್ಷಣ ಮಧ್ಯಪ್ರವೇಶಿಸಬೇಕು. ಇಲ್ಲದಿದ್ದಲ್ಲಿ ಅಲ್ಲೊಂದು ಸ್ಫೋಟವಾಗಬಹುದು. ಕಾಶ್ಮೀರದ ಪರಿಸ್ಥಿತಿ ಅನಿಯಂತ್ರಿತವಾಗಬಹುದೆಂದು ಆ್ಯಂಟನಿ ಹೇಳಿದರು.
ಕಣಿವೆಯ ಪರಿಸ್ಥಿತಿಗೆ ರಾಜಕೀಯ ಪರಿಹಾರವೊಂದನ್ನು ಹುಡುಕಲು ರಾಜ್ಯದ ಸಂಬಂಧಿಸಿದ ಎಲ್ಲರೊಂದಿಗೆ ಮಾತುಕತೆ ನಡೆಸುವ ತುರ್ತು ಕ್ರಮಕ್ಕೆ ಚಾಲನೆ ನೀಡಬೇಕು. ಕಾಶ್ಮೀರದ ಜನರ ಹೃದಯ ಹಾಗೂ ವಿಶ್ವಾಸವನ್ನು ಗೆಲ್ಲುವ ಪ್ರಯತ್ನ ಮಾಡಬೇಕೆಂದು ಅವರು ಅಭಿಪ್ರಾಯಿಸಿದರು.
ಇದು ಕಷ್ಟದ ಕೆಲಸ, ಆದರೂ ಅದನ್ನು ನಾವು ಮಾಡಲೇಬೇಕು. ನಾವು ಯುವಜನತೆಯ ವಿಶ್ವಾಸವನ್ನು ಮರಳಿ ಪಡೆಯಬೇಕು. ಅದು ಕೇವಲ ಮಾತುಕತೆಯಿಂದಷ್ಟೇ ಸಾಧ್ಯವೆಂದ ಆ್ಯಂಟನಿ, ಸಾಂಪ್ರದಾಯಿಕ ಮಾರ್ಗಗಳು ಸರಿಯಾಗದಿದ್ದಲ್ಲಿ ಬೇರೆ ದಾರಿಯನ್ನು ಹುಡುಕಬೇಕು ಹಾಗೂ ಮಾನವೀಯ ಪ್ರಯತ್ನವನ್ನು ಮಾಡಬೇಕೆಂದರು.
ಯುಪಿಎ ಸರಕಾರದ ಕಾಲದಲ್ಲಿ ಅಂತಹ ಕೆಲವು ಪ್ರಯತ್ನಗಳನ್ನು ಮಾಡಲಾಗಿತ್ತು. ಆದರೆ ಅವುಗಳನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಕಣಿವೆಯಲ್ಲಿರುವ ಭಯೋತ್ಪಾದಕರು ಹಾಗೂ ಕಾಶ್ಮೀರದ ಜನರನ್ನು ಸಮಾನವಾಗಿ ಪರಿಗಣಿಸಬಾರದೆಂದು ಆ್ಯಂಟನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News