×
Ad

ಸಂಜೋತಾ ಸ್ಫೋಟ ಪ್ರಕರಣ ತನಿಖೆಯಲ್ಲಿ ವಿಳಂಬ

Update: 2016-08-23 23:54 IST

ಇಸ್ಲಾಮಾಬಾದ್, ಆ.23: 2007ರ ಸಂಜೋತಾ ಎಕ್ಸ್‌ಪ್ರೆಸ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಯಲ್ಲಿ ‘ಅನಗತ್ಯ ವಿಳಂಬ’ವಾಗುತ್ತಿರುವುದಾಗಿ ಪಾಕಿಸ್ತಾನವು ಮಂಗಳವಾರ ಕಳವಳ ವ್ಯಕ್ತಪಡಿಸಿದೆ.

‘‘ಈ ಭಯೋತ್ಪಾದಕ ದಾಳಿ ಪ್ರಕರಣದ ವಿಚಾರಣಾ ಕಲಾಪಗಳ ಬಗ್ಗೆ ಮಾಹಿತಿಯನ್ನು ಪಾಕ್ ಜೊತೆ ಹಂಚಿಕೊಳ್ಳಬೇಕೆಂದು ಭಾರತ ಸರಕಾರವನ್ನು ನಾವು ಆಗ್ರಹಿಸುವೆವು’’ ಎಂದು ಪಾಕ್‌ನ ವಿದೇಶಾಂಗ ಕಾರ್ಯಾಲಯದ ಹೇಳಿಕೆಯೊಂದು ತಿಳಿಸಿದೆ.

ಸಂಜೋತಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 42 ಮಂದಿ ಪಾಕ್ ಪ್ರಜೆಗಳು ಸಾವನ್ನಪ್ಪಿದ್ದರೆಂದು ಹೇಳಿಕೆ ತಿಳಿಸಿದೆ. ಈ ಭಯೋತ್ಪಾದಕ ದಾಳಿಯಲ್ಲಿ ಶಾಮೀಲಾದ ಕೆಲವು ವ್ಯಕ್ತಿಗಳನ್ನು ದೋಷಮುಕ್ತಗೊಳಿಸಲು ಭಾರತ ಪ್ರಯತ್ನಿಸುತ್ತಿದೆಯೆಂದು ಅದು ಆರೋಪಿಸಿದೆ.

2007ರ ಫೆಬ್ರವರಿ 18 ಹಾಗೂ 19ರ ಮಧ್ಯರಾತ್ರಿ ಭಾರತ ಹಾಗೂ ಪಾಕ್ ಗಡಿಯಲ್ಲಿ ಸಂಚರಿಸುತ್ತಿದ್ದ ಸಂಜೋತಾ ಎಕ್ಸ್‌ಪ್ರೆಸ್ ರೈಲಿನ ಎರಡು ಬೋಗಿಗಳಲ್ಲಿ ಶಕ್ತಿಯುತವಾದ ಬಾಂಬ್‌ಗಳು ಸ್ಫೋಟಿಸಿ 68 ಮಂದಿ ಸಾವನ್ನಪ್ಪಿದ್ದರು.

ಈ ಭಯೋತ್ಪಾದಕ ಕೃತ್ಯಕ್ಕೆ ಸಂಬಂಧಿಸಿ ನಭ ಕುಮಾರ್ ಸರ್ಕಾರ್ ಯಾನೆ ಸ್ವಾಮಿ ಅಸೀಮಾನಂದ, ಸುನೀಲ್ ಜೋಶಿ(ಮೃತ), ರಾಮ್‌ಚಂದ್ರ ಕಾಲ್‌ಸಂಗ್ರಾ, ಸಂದೀಪ್ ಡಾಂಗೆ ಹಾಗೂ ಅಮಿತ್ (ನಾಪತ್ತೆ), ಲೋಕೇಶ್ ಶರ್ಮಾ, ಕಮಲ್ ಚೌಹಾಣ್ ಹಾಗೂ ರಾಜೇಂದರ್ ಚೌಧುರಿ ವಿರುದ್ಧ ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದೋಷಾರೋಪ ಪಟ್ಟಿ ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News