ಬಿಎಸ್ಸೆನ್ನೆಲ್‌ನಿಂದ 49 ರೂ. ಮಾಸಿಕ ಶುಲ್ಕದಲ್ಲಿ ಸ್ಥಿರ ದೂರವಾಣಿ
ಮಂಗಳೂರು, ಆ. 23: ಬಿಎಸ್ಸೆನ್ನೆಲ್ ಗ್ರಾಹಕರನ್ನು ತನ್ನತ್ತ ಸೆಳೆಯಲು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಇದೀಗ ಕೇವಲ 49 ರೂ. ಮಾಸಿಕ ಶುಲ್ಕದಂತೆ ಸ್ಥಿರ ದೂರವಾಣಿ ಸಂಪರ್ಕ ನೀಡುತ್ತಿದೆ. ಈ ಕುರಿತು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಎಸ್ಸೆನ್ನೆಲ್ ಜನರಲ್ ಮ್ಯಾನೇಜರ್ ಜಿ.ಆರ್.ರವಿ, ಬಿಎಸ್ಸೆನ್ನೆಲ್ ಆ.15ರಿಂದ 90 ದಿನಗಳ ಕಾಲ ಯಾವುದೇ ಸ್ಥಾಪನಾ ಶುಲ್ಕವಿಲ್ಲದೆ 49 ರೂ. ಮಾಸಿಕ ಶುಲ್ಕದಂತೆ ಸ್ಥಿರ ದೂರವಾಣಿ ಸಂಪರ್ಕ ನೀಡಲಾಗುತ್ತದೆ. ಇದು 6 ಮಾಸಿಕ ವ್ಯಾಲಿಡಿಟಿಯನ್ನು ಹೊಂದಿದ್ದು, ಬಳಿಕ ಆಯಾ ವ್ಯಾಪ್ತಿಯ ಜನರಲ್ ಫ್ಲ್ಯಾನ್‌ಗೆ ಪರಿವರ್ತನೆಗೊಳ್ಳಲಿದೆ. ಬಿಎಸ್ಸೆನ್ನೆಲ್ ಸ್ಥಿರ ದೂರವಾಣಿ ಗ್ರಾಹಕರಿಗೆ ರವಿವಾರ 24 ಗಂಟೆಗಳ ಯಾವುದೇ ಸ್ಥಿರ ಹಾಗೂ ಮೊಬೈಲ್ ಸಂಪರ್ಕಗಳಿಗೆ ಅಪರಿಮಿತ ಉಚಿತ ಕರೆಗಳು ಲಭ್ಯವಾಗಲಿದೆ. ಗ್ರಾಹಕ ಸ್ನೇಹಿ ಕಾರ್ಯಕ್ರಮದ ಅಂಗವಾಗಿ ಸ್ಥಿರ ದೂರವಾಣಿ ಗ್ರಾಹಕರಿಗೆ ಕೆಲವು ನಿರ್ದಿಷ್ಟ ಪ್ಲಾನ್‌ಗಳಿಗೆ ಅನ್ವಯವಾಗುವಂತೆ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9ರಿಂದ ಬೆಳಗ್ಗೆ 7 ಗಂಟೆವರೆಗೆ ಉಚಿತ ಕರೆಗಳು ಲಭ್ಯವಾಗಲಿದೆ. ಬಿಎಸ್ಸೆನ್ನೆಲ್ ಫ್ರಿ ಟು ಹೋಮ್ ಸೇವೆಯಡಿಯಲ್ಲಿ ಮೊಬೈಲ್ ಸಂಖ್ಯೆಗೆ ಬಂದ ಕರೆಗಳನ್ನು ಬಿಎಸ್ಸೆನ್ನೆಲ್ ಸ್ಥಿರ ದೂರವಾಣಿಗೆ ವರ್ಗಾಯಿಸುವ ಸೌಲಭ್ಯ ನೀಡಿದೆ. ಇದರ ವಾಯಿಸ್ ಕ್ವಾಲಿಟಿ ಅತ್ಯುತ್ತಮವಾಗಿದ್ದು, ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ ಎಂದರು.ಬಿಎಸ್ಸೆನ್ನೆಲ್ ವತಿಯಿಂದ ದ.ಕ.ಹಾಗೂ ಉಡುಪಿ ಜಿಲ್ಲೆಯ 1500 ಪ್ರಮುಖ ಸ್ಥಳಗಳಲ್ಲಿ ಶೀಘ್ರ ವೈ-ಫೈ ಸೌಲಭ್ಯವನ್ನು ಅನುಷ್ಠಾನಗೊಳಿಸಲಾಗುವುದು. ಈ ಸೌಲಭ್ಯದಿಂದ ಗ್ರಾಹಕರು ದಿನಕ್ಕೆ 15 ನಿಮಿಷಗಳ ಕಾಲ 4ಜಿ ಇಂಟರ್‌ನೆಟ್ ಸೌಲಭ್ಯವನ್ನು ಉಚಿತವಾಗಿ ಪಡೆಯಬಹುದು. ಈ ವರ್ಷಾಂತ್ಯದಲ್ಲಿ ಇದು ಅನುಷ್ಠಾನಕ್ಕೆ ಬರಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಡಿಜಿಎಂಗಳಾದ ಸುರೇಶ್, ವಿಠಲ್ ಆಳ್ವ, ಬಾಲಕೃಷ್ಣ, ಡಿಎಫ್‌ಎ ಶಿವರಾಮ ಕಾರಂತ ಉಪಸ್ಥಿತರಿದ್ದರು.