ಹಿಂಸೆಯಿಲ್ಲದೆ ನಡೆದ ಕಳ್ಳತನಕ್ಕೆ ವಿಮೆ ಇಲ್ಲ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು

Update: 2016-08-24 03:30 GMT

ಹೊಸದಿಲ್ಲಿ, ಆ.24: ನಿರ್ದಿಷ್ಟ ವಸ್ತುವಿಗೆ ವಿಮೆ ಮಾಡಿಸಿದ್ದರೂ, ಹಿಂಸೆಯಿಲ್ಲದೆ ಅದು ಕಳ್ಳತನವಾದರೆ ಅದಕ್ಕೆ ವಿಮಾ ಪರಿಹಾರ ಸಿಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ,

 2004ರ ಸುಪ್ರೀಂಕೋರ್ಟ್ ತೀರ್ಪನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ರಾವ್ ಅವರು, "ಬಲವಂತದಿಂದ ಅಥವಾ ಹಿಂಸೆ ಇಲ್ಲದೇ ಕಳ್ಳತನ ನಡೆದರೆ, ವಿಮಾ ಕಂಪನಿ ಅದಕ್ಕೆ ಪರಿಹಾರ ನೀಡಬೇಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸುಲಿಗೆ ಎಂದರೆ ಕಳ್ಳತನಕ್ಕೆ ಸಮಾನವಾಗಿದ್ದು, ಇದು ಬಲಪ್ರಯೋಗ ಅಥವಾ ಹಿಂಸೆಯನ್ನು ಒಳಗೊಂಡಿರುತ್ತದೆ. ಇಂಥ ಬಲಪ್ರಯೋಗ ಅಥವಾ ಹಿಂಸೆ ಇಲ್ಲದಿದ್ದರೆ, ವಿಮಾ ಪರಿಹಾರಕ್ಕೆ ದಾವೆ ಸಲ್ಲಿಸುವಂತಿಲ್ಲ ಎಂದು ಹೇಳಿದ್ದಾರೆ.

ಒಡಿಶಾದ ಸರಕಾರಿ ವಲಯದ ಉದ್ದಿಮೆಯೊಂದು 34.40 ಲಕ್ಷ ರೂಪಾಯಿ ಪರಿಹಾರ ಹಾಗೂ ದಾವಾ ವೆಚ್ಚಕ್ಕೆ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಈ ತೀರ್ಪು ನೀಡಿದ್ದಾರೆ. ಒಡಿಶಾ ಸರಕಾರದ ಕೈಗಾರಿಕಾ ಉತ್ತೇಜನ ಹಾಗೂ ಬಂಡವಾಳ ನಿಗಮ ಜೋಸ್ನಾ ಕಾಸ್‌ಟಿಂಗ್ ಸೆಂಟರ್‌ಗೆ 40.74 ಲಕ್ಷ ರೂ. ಸಾಲ ನೀಡಿತ್ತು. ಇದರ ಮರುಪಾವತಿ ಆಗಿರಲಿಲ್ಲ. ನಿಗಮವು ಆ ಕಂಪೆನಿಗೆ ಸೇರಿದ ಆಸ್ತಿಯನ್ನು ವಶಕ್ಕೆ ಪಡೆಯಿತು. ಈ ಆಸ್ತಿಗೆ 1996ರಲ್ಲಿ ಸುಲಿಗೆ ಹಾಗೂ ಮನೆಗಳ್ಳತನ ನೀತಿಯಡಿ 46 ಲಕ್ಷದ ವಿಮೆಯನ್ನು ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪೆನಿಯಲ್ಲಿ ಮಾಡಿಸಿತು.

ಸ್ವಾಧೀನಪಡಿಸಿಕೊಂಡ ಆಸ್ತಿಯನ್ನು 1997ರಲ್ಲಿ ಹರಾಜು ಮಾಡಲಾಯಿತು. ಆಗ ಘಟಕದ ಕೆಲ ಅಂಶಗಳು ಹಾಗೂ ಯಂತ್ರೋಪಕರಣಗಳು ಕಾಣೆಯಾಗಿರುವುದು ಗಮನಕ್ಕೆ ಬಂತು. ಈ ಹಿನ್ನೆಲೆಯಲ್ಲಿ ರೆಮೋನಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿ 34.40 ಲಕ್ಷ ರೂ. ವಿಮಾ ಪರಿಹಾರ ಕೋರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News