ಪ್ರಧಾನಿ ಮೋದಿಯವರ ಸಂಪತ್ತಿನಲ್ಲಿ ಎಷ್ಟು ಹೆಚ್ಚಳವಾಗಿದೆ ಗೊತ್ತೇ?

Update: 2016-08-24 03:42 GMT

ಹೊಸದಿಲ್ಲಿ, ಆ.24: ಪ್ರಧಾನಿ ನರೇಂದ್ರ ಮೋದಿಯವರ ಸಂಪತ್ತಿನಲ್ಲಿ 2015-16ನೆ ಸಾಲಿನಲ್ಲಿ 32 ಲಕ್ಷ ರೂ. ಹೆಚ್ಚಳವಾಗಿದೆ. ಬ್ಯಾಂಕ್ ಹೂಡಿಕೆ ಹಾಗೂ ಪುಸ್ತಕ ಮಾರಾಟದ ರಾಜಧನದಿಂದ ದೊರಕಿದ ಹಣ ಇದರಲ್ಲಿ ಮುಖ್ಯವಾದದ್ದು.

2015-16ನೆ ಸಾಲಿನಲ್ಲಿ ಮೋದಿ ತಮ್ಮ ಪುಸ್ತಕ ಮಾರಾಟದಿಂದ 12.35 ಲಕ್ಷ ರೂ. ರಾಜಧನ ಪಡೆದಿದ್ದಾರೆ. ಇವರ ನಿರಖು ಠೇವಣಿ 20 ಲಕ್ಷ ರೂ. ಹೆಚ್ಚಿದೆ ಎಂದು ಸ್ವಯಂಘೋಷಿತ ಪ್ರಮಾಣಪತ್ರದಲ್ಲಿ ಮೋದಿ ಹೇಳಿದ್ದಾರೆ. ಆಡಳಿತದ ಉನ್ನತ ಹಂತದಲ್ಲಿ ಪಾರದರ್ಶಕತೆ ಕಾಪಾಡುವ ಸಲುವಾಗಿ, ವಾರ್ಷಿಕ ಆಸ್ತಿ ಹಾಗೂ ಹೊಣೆಗಾರಿಕೆಯ ವಿವರಗಳನ್ನೊಳಗೊಂಡ ಅಫಿಡವಿಟ್ ಬಿಡುಗಡೆ ಮಾಡಿದ್ದಾರೆ.

2016ರ ಮಾರ್ಚ್ 31ಕ್ಕೆ ಘೋಷಿಸಿದ ಪ್ರಮಾಣಪತ್ರದ ಪ್ರಕಾರ, ಹಿಂದಿನ ವರ್ಷಕ್ಕಿಂತ ಅವರ ಸಂಪತ್ತು ಶೇಕಡ 22.8ರಷ್ಟು ಹೆಚ್ಚಿದೆ. ಪ್ರಧಾನಿ ಮಾಸಿಕ 1.6 ಲಕ್ಷ ರೂ. ವೇತನ ಪಡೆಯುತ್ತಾರೆ.

ಈ ಹೇಳಿಕೆಯ ಪ್ರಕಾರ, ಬ್ಯಾಂಕ್ ಠೇವಣಿಯು ಅವರ ನೆಚ್ಚಿನ ಹೂಡಿಕೆಯಾಗಿದೆ. ಅವರ ಬಹಳಷ್ಟು ಮಂದಿ ಸಹೋದ್ಯೋಗಿಗಳು ಖಾಸಗಿ ಬ್ಯಾಂಕ್‌ಗಳ ಮ್ಯೂಚ್‌ವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದ್ದರೆ, ಮೋದಿ ಭಾರತೀಯ ಸ್ಟೇಟ್ ಬ್ಯಾಂಕಿನ ಗಾಂಧಿನಗರ ಶಾಖೆಯಲ್ಲಿ 20.35 ಲಕ್ಷ ರೂಪಾಯಿ ಠೇವಣಿ ಇಟ್ಟಿದ್ದಾರೆ. ಇದರಿಂದಾಗಿ ಅವರ ಒಟ್ಟು ಠೇವಣಿ ಮೊತ್ತ 51.27 ಲಕ್ಷ ರೂ. ಆಗಿದೆ.

ಷೇರು ಮಾರುಕಟ್ಟೆಯಿಂದ ದೂರ ಇರುವ ಮೋದಿ, ಲಾರ್ಸನ್ ಅಂಟ್ ಟೂಬ್ರೊ ಕಂಪೆನಿಯ 20 ಸಾವಿರ ರೂ.ಮೌಲ್ಯದ ಮೂಲಸೌಕರ್ಯ ಬಾಂಡನ್ನು ಖರೀದಿಸಿದ್ದಾರೆ. ಇದರಿಂದ ಅವರಿಗೆ ತೆರಿಗೆ ಉಳಿಸಲು ಸಾಧ್ಯವಾಗಿದೆ. ಮೋದಿ ಇಂಗ್ಲಿಷ್ ಹಾಗೂ ಗುಜರಾತಿಯಲ್ಲಿ ಯೋಗದಿಂದ ಹಿಡಿದು, ಶಿಕ್ಷಣ ತತ್ವಶಾಸ್ತ್ರವರೆಗೆ 15 ಕೃತಿಗಳನ್ನು ಬರೆದಿದ್ದಾರೆ. ಗುಜರಾತ್‌ನ ಗಾಂಧಿನಗರದ ಸೆಕ್ಟರ್ 1ರಲ್ಲಿರುವ ಮನೆಯಲ್ಲಿ ನಾಲ್ಕನೆ ಒಂದು ಪಾಲು ಹೊಂದಿದ್ದು, ಇದರ ಮೌಲ್ಯ ಒಂದು ಕೋಟಿ ರೂಪಾಯಿ. ಈ ವರ್ಷ ಮೋದಿ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News