ಕೇರಳದಲ್ಲಿ ಬಾರ್, ವಿದೇಶಿ ಮದ್ಯ ಮಾರಾಟ ನಿಷೇಧದ ಇಂಪ್ಯಾಕ್ಟ್ ಏನು?

Update: 2016-08-24 05:30 GMT

ಕಾಸರಗೋಡು, ಆ.24: ಬಾರ್ ಮತ್ತು ವಿದೇಶಿ ಮದ್ಯ ಮಾರಾಟ ನಿಷೇಧಿಸಿದ ಬಳಿಕ ಒಂದು ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ಗಾಂಜಾ ಪ್ರಕರಣಗಳ ಪ್ರಮಾಣ ಶೇ. 68 ರಷ್ಟು ಹೆಚ್ಚಳವಾಗಿದೆ ಎಂದು ಅಬಕಾರಿ ಇಲಾಖೆಯ ಅಂಕಿ ಅಂಶ ತಿಳಿಸುತ್ತಿವೆ.

2015ರ ಆಗಸ್ಟ್‌ನಲ್ಲಿ ಮದ್ಯ ನಿಷೇಧ ಜಾರಿಗೆ ಬಂದಿತ್ತು. ತ್ರೀ ಸ್ಟಾರ್, ಫೋರ್ ಸ್ಟಾರ್ ಬಾರ್‌ಗಳನ್ನು ಮುಚ್ಚಲಾಗಿತ್ತು. 400ಕ್ಕೂ ಅಧಿಕ ಬಾರ್ ಮತ್ತು ಶೇ.10 ರಷ್ಟು ಸರಕಾರಿ ಸ್ವಾಮ್ಯದ ಮದ್ಯ ಮಾರಾಟ ಮಳಿಗೆಗಳನ್ನು ಮುಚ್ಚಿದ ಪರಿಣಾಮ ಗಾಂಜಾ ಸೇರಿದಂತೆ ರಾಜ್ಯದಲ್ಲಿ ಮಾದಕ ವಸ್ತುಗಳ ಬಳಕೆ ಗಣನೀಯವಾಗಿ ಏರಿಕೆಯಾಗಿದೆ.

ಸಾರಾಯಿ, ಕಳ್ಳಭಟ್ಟಿ, ಅಕ್ರಮ ಮದ್ಯ ಸಾಗಾಟ ಸೇರಿದಂತೆ ಅಬಕಾರಿ ಪ್ರಕರಣಗಳಲ್ಲಿ ಶೇ.200ರಷ್ಟು ಏರಿಕೆಯಾಗಿದೆ ಎಂದು ಅಬಕಾರಿ ಆಯುಕ್ತ ಹೃಷಿರಾಜ್ ಸಿಂಗ್ ಸ್ಪಷ್ಟಪಡಿಸಿದ್ದಾರೆ .

2014 ರಲ್ಲಿ 972 ಗಾಂಜಾ ಪ್ರಕರಣಗಳು ದಾಖಲಾಗಿದ್ದರೆ, 2015ರಲ್ಲಿ 1,562 ಪ್ರಕರಣಗಳು ದಾಖಲಾಗಿದ್ದವು. ಆದರೆ ಕಳೆದ ಏಳು ತಿಂಗಳ ಅವಧಿಯಲ್ಲೇ ಬರೋಬ್ಬರಿ 1,600 ಪ್ರಕರಣಗಳು ದಾಖಲಾಗಿದ್ದು ಗಣನೀಯವಾಗಿ ಹೆಚ್ಚಾಗುತ್ತಿದೆ ಎಂದು ಅಂಕಿ ಅಂಶಗಳು ತಿಳಿಸುತ್ತಿವೆ. ಕೇವಲ ಎರಡೂವರೆ ತಿಂಗಳ ಅವಧಿಯಲ್ಲಿ 6,080 ಅಬಕಾರಿ ಪ್ರಕರಣಗಳನ್ನು ದಾಖಲಿಸಲಾಗಿದೆ. 5,581 ಮಂದಿಯನ್ನು ಬಂಧಿಸಲಾಗಿದೆ.

718 ಮಾದಕ ವಸ್ತು ಪ್ರಕರಣಗಳು ಪತ್ತೆಯಾಗಿದ್ದು, 791 ಮಂದಿಯನ್ನು ಬಂಧಿಸಲಾಗಿದೆ. 40 ಸಾವಿರ ಕಿಲೋ ಪಾನ್ ಮಸಾಲ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ 11,000 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. 30 ಸಾವಿರ ಲೀಟರ್ ಕಳ್ಳಭಟ್ಟಿ ವಶಪಡಿಸಿಕೊಳ್ಳಲಾಗಿದೆ. ಅಕ್ರಮವಾಗಿ ಸಾಗಾಟ ಮಾಡಿದ 8,107 ಲೀಟರ್ ಮದ್ಯವನ್ನೂ ವಶಪಡಿಸಿಕೊಳ್ಳಲಾಗಿದೆ. ವಿದೇಶಿ ಮದ್ಯ ಸೇರಿದಂತೆ ಮಾದಕ ವಸ್ತು ಸಾಗಾಟ ಮಾರಾಟ ಮಾಡಿದ 302 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 206 ಕಿಲೋ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಕಾಸರಗೋಡು, ಪಾಲಕ್ಕಾಡ್, ಇಡುಕ್ಕಿ ಜಿಲ್ಲೆಗಳಲ್ಲಿನ 68 ಗಾಂಜಾ ತಯಾರಿಕಾ ಕೇಂದ್ರಗಳನ್ನು ಪತ್ತೆಹಚ್ಚಿ ನಾಶಗೊಳಿಸಲಾಗಿದೆ. 700 ಲೀಟರ್ ಸ್ಪಿರಿಟ್ ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಮೂಲಗಳು ತಿಳಿಸಿವೆ.

14 ಜಿಲ್ಲೆಗಳ ಕಂಟ್ರೋಲ್ ರೂಗಳಲ್ಲಿ ತಲಾ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ. ಗಡಿಯಲ್ಲಿ ತಟರಕ್ಷಣಾ ಪಡೆ, ಬೋಟ್‌ಗಳ ನೆರವಿನೊಂದಿಗೆ ತಪಾಸಣೆ ಮತ್ತು ವಿಶೇಷ ನಿಗಾ ಇಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News