ಸ್ಕೋರ್ಪೀನ್ ಜಲಾಂತರ್ಗಾಮಿ ನೌಕೆಯ ರಹಸ್ಯ ಮಾಹಿತಿ ಸೋರಿಕೆ ?

Update: 2016-08-24 06:38 GMT

ಹೊಸದಿಲ್ಲಿ, ಆ.24: ಭಾರತದ ಸ್ಕೋರ್ಪೀನ್ ಜಲಾಂತರ್ಗಾಮಿ ನೌಕೆಗೆ ಸಂಬಂಧಿಸಿದ ಸುಮಾರು 22,000 ಪುಟಗಳಷ್ಟು ಸೂಕ್ಷ್ಮ ಹಾಗೂ ರಹಸ್ಯ ಮಾಹಿತಿಯು ಸೋರಿಕೆಯಾಗಿದೆಯೆಂದು ಆಸ್ಟ್ರೇಲಿಯಾ ಮಾಧ್ಯಮಗಳು ವರದಿ ಮಾಡಿವೆಯೆಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯೊಂದು ತಿಳಿಸಿದೆ. ಆದರೆ ಈ ಸೋರಿಕೆ ವಿಚಾರ ಇನ್ನೂ ದೃಢಪಟ್ಟಿಲ್ಲವೆಂದು ಇಂಡಿಯನ್ ಎಕ್ಸ್‌ಪ್ರೆಸ್ ಹೇಳಿಕೊಂಡಿದೆ.

ಈ ಜಲಾಂತರ್ಗಾಮಿ ನೌಕೆಯನ್ನು ಫ್ರೆಂಚ್ ಸಂಸ್ಥೆ ಡಿಸಿಎನ್‌ಎಸ್ ವಿನ್ಯಾಸಗೊಳಿಸಿದೆ.

‘‘ರಿಸ್ಟ್ರಿಕ್ಟೆಡ್ ಸ್ಕೋರ್ಪೀನ್ ಇಂಡಿಯಾ’’ಎಂದು ಗುರುತಿಸಲ್ಪಟ್ಟ ಈ ದಾಖಲೆಗಳು ಭಾರತದ ನೆರೆ ರಾಷ್ಟ್ರಗಳಾದ ಪಾಕಿಸ್ತಾನ ಅಥವಾ ಚೀನಾದ ಕೈಗಳಿಗೆ ಹೋಗಿದ್ದೇ ಆದಲ್ಲಿ ಅವುಗಳು ಸ್ಫೋಟಕ ಮಾಹಿತಿಯನ್ನೇ ಪಡೆದಂತಾಗುವುದು ಎನ್ನಲಾಗಿದೆ.

ದಿ ಆಸ್ಟ್ರೇಲಿಯನ್ ಪ್ರಕಾರ ಸುಮಾರು 22,400 ಪುಟಗಳ ಸೋರಿಕೆಯಾದ ದಾಖಲೆಗಳು ಆರು ಸ್ಕೋರ್ಪೀನ್ ಜಲಾಂತರ್ಗಾಮಿ ನೌಕೆಗಳ ಯುದ್ಧ ಸಾಮರ್ಥ್ಯದ ಸಂಪೂರ್ಣ ರಹಸ್ಯ ಮಾಹಿತಿಗಳಿವೆಯೆನ್ನಲಾಗಿದೆ. ಈ ನೌಕೆಯ ಅಂತರ್ಜಲ ಹಾಗೂ ನೀರಿನ ಮೇಲ್ಮೈಯಲ್ಲಿರುವ ಸೆನ್ಸರ್‌ಗಳು, ಯುದ್ಧ ನಿರ್ವಹಣಾ ವ್ಯವಸ್ಥೆ, ಟಾರ್ಪೆಡೋ ಲಾಂಚ್ ವ್ಯವಸ್ಥೆ, ಸಂವಹನ ಹಾಗೂ ನೇವಿಗೇಶನ್ ಸಾಧನಗಳ ಬಗ್ಗೆ ಸೋರಿಕೆಯಾದ ದಾಖಲೆಗಳಲ್ಲಿ ಮಾಹಿತಿ ಇತ್ತೆನ್ನಲಾಗಿದೆ.

ಭಾರತದ ಆರು ಸ್ಕೋರ್ಪೀನ್ ಜಲಾಂತರ್ಗಾಮಿ ನೌಕೆಗಳಲ್ಲಿ ಮೊದಲ ನೌಕೆ ಕಲ್ವಾರಿಯನ್ನು ಪ್ರಾಯೋಗಿಕವಾಗಿ ಈ ವರ್ಷದ ಮೇ ತಿಂಗಳಲ್ಲಿ ಕಮಿಷನ್ ಮಾಡಲಾಗಿದ್ದು, ಎಲ್ಲಾ ಆರು ಜಲಾಂತರ್ಗಾಮಿ ನೌಕೆಗಳು ಸಮುದ್ರಕ್ಕಿಳಿದು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸಲಾರಂಭಿಸಿದಾಗ ಅವುಗಳು ಮುಂದಿನ ಎರಡು ದಶಕಗಳ ಕಾಲ ಭಾರತದ ನೌಕಾ ಪಡೆಯ ಜಲಾಂತರ್ಗಾಮಿ ವಿಭಾಗದ ಪ್ರಮುಖ ಅಂಗಗಳಾಗಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News