×
Ad

ಮುಚ್ಚುವ ಭೀತಿಯಲ್ಲಿದೆ ಕಣ್ಣೂರು ವಿಶ್ವವಿದ್ಯಾನಿಲಯದ ತರಬೇತಿ ಘಟಕ

Update: 2016-08-24 12:58 IST

ಕಾಸರಗೋಡು, ಆ.24: ಶಿಕ್ಷಣ ವಲಯದಲ್ಲಿ ಹಿಂದುಳಿದಿರುವ ಕಾಸರಗೋಡು ಜಿಲ್ಲೆಯಲ್ಲಿ ಒಂದೂವರೆ ದಶಕದ ಹಿಂದೆ ಆರಂಭಿಸಿದ್ದ ಕಣ್ಣೂರು ವಿಶ್ವವಿದ್ಯಾನಿಲಯದ ತರಬೇತಿ ಘಟಕ ಮುಚ್ಚುವ ಭೀತಿಯಲ್ಲಿದೆ. ಸಾವಿರಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದ ಈ ಘಟಕ ಇದೀಗ ಅಧಿಕಾರಿಗಳ ನಿರ್ಲಕ್ಷಕ್ಕೆ ಬಲಿಯಾಗುತ್ತಿದೆ.

2000 ದಲ್ಲಿ ಈ ಘಟಕವನ್ನು ಆರಂಭಿಸಲಾಗಿತ್ತು. ಆದರೆ ಇಂದಿಗೂ ಇಲ್ಲಿನ ಸಮಸ್ಯೆ ಮುಗಿದಿಲ್ಲ. ಹಾಸ್ಟೆಲ್‌ಗೆ ಕಟ್ಟಡ ನಿರ್ಮಿಸಿದರೂ ತೆರೆದುಕೊಟ್ಟಿಲ್ಲ. ಸೌಲಭ್ಯಗಳಿಲ್ಲದಿರುವುದರಿಂದ ವಿದ್ಯಾರ್ಥಿಗಳು ಆಗಾಗ ಪ್ರತಿಭಟನೆ ನಡೆಸುತ್ತಿದ್ದರು. ವಿದ್ಯಾರ್ಥಿಗಳ ನಿರಂತರ ಹೋರಾಟದಿಂದ ಇಲ್ಲಿಗೆ ಕೆಲ ಸೌಲಭ್ಯವನ್ನು ಕಲ್ಪಿಸಲಾಗಿತ್ತು.

ಕಳೆದ ಒಂದೂವರೆ ದಶಕಗಳಿಂದ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ಎಂ.ಸಿಎ, ಎಂಬಿಎ, ಬಿ.ಎಡ್ ಕೋರ್ಸ್‌ಗಳನ್ನು ಪಡೆದಿದ್ದಾರೆ. ಆದರೆ ಈಗ ವಿದ್ಯಾರ್ಥಿಗಳ ಕೊರತೆಯಿಂದಾಗಿ ಕೇಂದ್ರವು ಮುಚ್ಚುವ ಸಂದಿಗ್ಧ ಸ್ಥಿತಿಗೆ ತಲುಪಿದೆ. ಹಾಸ್ಟೆಲ್ ಕಟ್ಟಡ ಪೂರ್ಣಗೊಂಡಿದ್ದರೂ ಇನ್ನೂ ತೆರೆದುಕೊಟ್ಟಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಇಲ್ಲದಂತಾಗಿದೆ. ವಿದ್ಯಾರ್ಥಿಗಳ ದಾಖಲಾತಿ ಸಂದರ್ಭದಲ್ಲಿ ಅಧಿಕಾರಿಗಳ ನಿರ್ಲಕ್ಷ ಧೋರಣೆಯಿಂದ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಲೇ ಇದೆ. ಈ ಹಿನ್ನಲೆಯಲ್ಲಿ ಹೊಸದಾಗಿ ದಾಖಲಾತಿ ಪಡೆದ ವಿದ್ಯಾರ್ಥಿಗಳನ್ನು ನೀಲೇಶ್ವರದಲ್ಲಿರುವ ಕೇಂದ್ರಕ್ಕೆ ವರ್ಗಾಯಿಸುವ ಯತ್ನ ನಡೆಯುತ್ತಿದೆ. ಮೊದಲ ಹಂತವಾಗಿ ಎಂಸಿ ಎ, ಎಂಬಿಎ ಕೋಸರ್‌ಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎನ್ನಲಾಗಿದೆ. ಈ ಮೂಲಕ ಕೇಂದ್ರವನ್ನು ಮುಚ್ಚಲು ಹುನ್ನಾರ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಕಳೆದ ವರ್ಷ ಬಿಎಡ್‌ನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆಯಾಗಿದೆ ಎಂಬ ಕಾರಣಕ್ಕೆ ಅರೇಬಿಕ್ ಸೇರಿದಂತೆ ಕೋರ್ಸ್‌ಗಳನ್ನು ಸ್ಥಗಿತಗೊಳಿಸಲು ಮುಂದಾಗಿತ್ತು. ಈ ಸಂದರ್ಭದಲ್ಲಿ ನಡೆದ ಹೋರಾಟದ ಪರಿಣಾಮ ಕೋರ್ಸ್‌ಗಳನ್ನು ರದ್ದುಗೊಳಿಸದಿರಲು ಅಧಿಕಾರಿಗಳು ತೀರ್ಮಾನಿಸಿದ್ದರು. ಆದರೆ ಈಗ ಸೂಕ್ತ ರೀತಿಯಲ್ಲಿ ದಾಖಲಾತಿ ನಡೆಸದೆ ವಿದ್ಯಾರ್ಥಿಗಳ ಕೊರತೆ ಸೃಷ್ಟಿಸಲಾಗುತ್ತಿದೆ ಎಂಬ ಆರೋಪ ಕೂಡಾ ಕೇಳಿಬರುತ್ತಿದೆ.

ಹೊರ ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳು ಪ್ರವೇಶ ಬಯಸಿ ಇಲ್ಲಿಗೆ ಬಯಸುತ್ತಿದ್ದಾರೆ. ಆದರೆ ಹಾಸ್ಟೆಲ್ ಸೌಲಭ್ಯ ಇಲ್ಲ ಎಂಬ ಕಾರಣಕ್ಕೆ ಅಡ್ಮಿಷನ್ ನಿಷೇಧಿಸಲಾಗುತ್ತಿದ್ದು, ಇದರಿಂದ ದಾಖಲಾತಿಗೆಂದು ಆಗಮಿಸುವ ವಿದ್ಯಾರ್ಥಿಗಳು ಮರಳುವ ಸ್ಥಿತಿ ಉಂಟಾಗುತ್ತಿದೆ. ಸಮಸ್ಯೆ ಪರಿಹರಿಸಲು ವಿಶ್ವವಿದ್ಯಾನಿಲಯ ಅಧಿಕಾರಿಗಳು ಮುಂದಾಗದಿದ್ದಲ್ಲಿ ವಿದ್ಯಾರ್ಥಿಗಳು, ಜನಪ್ರತಿನಿಧಿಗಳು ಜಂಟಿಯಾಗಿ ಹೋರಾಟ ನಡೆಸಸುತ್ತೇವೆ ಎಂಬ ಎಚ್ಚರಿಕೆಯನ್ನು ಸಾರ್ವಜನಿಕರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News