ಆ್ಯಮ್ನೆಸ್ಟಿ ಇಂಟರ್‌ನ್ಯಾಷಲ್ ಸಂಸ್ಥೆ ವಿರುದ್ಧ ಬಿಜೆಪಿ ಪ್ರತಿಭಟನೆ

Update: 2016-08-24 08:43 GMT

ಮಂಗಳೂರು, ಆ.24: ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆ ದೇಶ ವಿರೋಧಿ ಭಾವನೆಗಳನ್ನು ಮೂಡಿಸುವ ಕೃತ್ಯದಲ್ಲಿ ಶಾಮೀಲಾಗಿದೆ ಎಂದು ಆರೋಪಿಸಿ ಬಿಜೆಪಿ ಪಕ್ಷದ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವತಿಯಿಂದ ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಈ ಸಂದರ್ಭ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಾನವ ಹಕ್ಕಿನ ಉಲ್ಲಂಘನೆ ಬಗ್ಗೆ ಆ್ಯಮ್ನೆಸ್ಟಿ ಸಂಸ್ಥೆಯು ಕಾಶ್ಮೀರ ಕಣಿವೆ, ಕಾಶ್ಮೀರದ ಬಲೂಚಿಸ್ತಾನಕ್ಕೆ ಹೋಗಿ ನೋಡಿ ಬರಲಿ ಎಂದು ಸವಾಲೆಸೆದರು.

ಆ್ಯಮ್ನೆಸ್ಟಿ ರಾಷ್ಟ್ರ ವಿರೋಧಿ ಘೋಷಣೆ ಕೂಗುವವರಿಗೆ ಬೆಂಬಲ ನೀಡುವ ಸಂಸ್ಥೆಯಾಗಿದ್ದು, ರಾಷ್ಟ್ರ ವಿರೋಧಿ ಶಕ್ತಿಗಳನ್ನು ಹತ್ತಿಕ್ಕುವಲ್ಲಿ ರಾಜ್ಯ ಸರಕಾರವೂ ವಿಫಲವಾಗಿದೆ ಎಂದು ದೂರಿದರು. ಇದೇ ವೇಳೆ ಮಾಜಿ ಸಂಸದೆ ರಮ್ಯಾ ಅವರ ಹೇಳಿಕೆಯನ್ನೂ ಖಂಡಿಸಿದರಲ್ಲದೆ, ರಮ್ಯಾ ಅವರನ್ನು ಸಮರ್ಥಿಸಿ ಹೇಳಿಕೆ ನೀಡಿರುವ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್‌ರವರು ದೇಶಪ್ರೇಮ ಹಾಗೂ ದೇಶದ್ರೋಹದ ಕುರಿತಂತೆ ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದರು.

ಆರೋಪಿಗಳನ್ನು ಬಂಧಿಸದಿರುವ ಜತೆಯಲ್ಲೇ, ಆ್ಯಮ್ನೆಸ್ಟಿ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಳಂಬವಾಗುತ್ತಿದೆ ಎಂದು ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ನಡೆಸಿರುವುದು ಅಮಾನುಷ ಕೃತ್ಯ ಎಂದು ಪಕ್ಷದ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಡಿ. ವೇದವ್ಯಾಸ ಕಾಮತ್ ಹೇಳಿದರು.

ಪ್ರತಿಭಟನೆಯನ್ನುದ್ದೇಶಿಸಿ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಮೋನಪ್ಪ ಭಂಡಾರಿ, ಬ್ರಿಜೇಶ್ ಚೌಟ, ರಹೀಂ ಉಚ್ಚಿಲ್ ಮೊದಲಾದವರು ಮಾತನಾಡಿದರು. ಬಳಿಕ, ದೇಶದ್ರೋಹದ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು. ದೇಶದ್ರೋಹದ ಆರೋಪದ ಹಿನ್ನೆಲೆಯಲ್ಲಿ ದೇಶವಿರೋಧಿ ಘೋಷಣೆ ಕೂಗಿದವರನ್ನು ಕೂಡಲೇ ಬಂಧಿಸಬೇಕು. ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗೆ ಸವಾಲು ಹಾಕುತ್ತಿರುವ ಕುರಿತು ಸಾರ್ವಜನಿಕವಾಗಿ ಮೂಡಿರುವ ಆತಂಕವನ್ನು ದೂರ ಮಾಡಬೇಕು. ಅಮಾಯಕ ವಿದ್ಯಾರ್ಥಿಗಳ ಮೇಲೆ ಅಮಾನುಷವಾಗಿ ವರ್ತಿಸಿದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಕಾನೂನುಕ್ರಮ ಜರಗಿಸಬೇಕು ಎಂಬ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ರವಿಶಂಕರ ಮಿಜಾರ್, ಸತೀಶ್ ಪ್ರಭು, ಸಂಧ್ಯಾ ವೆಂಕಟೇಶಂ, ರೂಪಾಡಿ ಬಂಗೇರ, ಭಾಸ್ಕರ ಚಂದ್ರ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News