ಜಲಾಂತರ್ಗಾಮಿ ನೌಕೆಯ ರಹಸ್ಯ ಸೋರಿಕೆ
ಹೊಸದಿಲ್ಲಿ, ಆ.24: ಭಾರತೀಯ ನೌಕಾಪಡೆಗಾಗಿ ಜಲಾಂತರ್ಗಾಮಿಗಳನ್ನು ನಿರ್ಮಿಸುತ್ತಿದ್ದ ಫ್ರೆಂಚ್ ಕಂಪೆನಿಯ ಅತಿ ಸೂಕ್ಷ್ಮ ರಹಸ್ಯಗಳು ಸೋರಿಕೆಯಾಗಿರುವ ಪ್ರಕರಣದ ಬಗ್ಗೆ ಸರಕಾರ ತನಿಖೆಗೆ ಆದೇಶ ನೀಡಿದೆ .
ಫ್ರೆಂಚ್ ನೌಕಾ ನಿರ್ಮಾಣ ಸಂಸ್ಥೆ ಡಿಸಿಎನ್ಎಸ್ನ 22,400 ಪುಟಗಳು ಸೋರಿಕೆಯಾಗಿವೆ ಎಂದು ‘ದಿ ಆಸ್ಟ್ರೇಲಿಯನ್’ ನಲ್ಲಿ ಪ್ರಕಟವಾಗಿರುವ ವರದಿಯ ಹಿನ್ನೆಲೆಯಲ್ಲಿ ಸರಕಾರ ತನಿಖೆಗೆ ಆದೇಶ ನೀಡಿದೆ ಎಂದು ರಕ್ಷಣಾ ಸಚಿವ ಮನೋಹರ ಪರಿಕ್ಕರ್ ತಿಳಿಸಿದ್ದಾರೆ.
ಮುಂಬೈನಲ್ಲಿ ಆರು ಸ್ಕಾರ್ಪೇನ್ ಜಲಾಂತರ್ಗಾಮಿಗಳನ್ನು ನಿರ್ಮಿಸುತ್ತಿದ್ದ ಫ್ರೆಂಚ್ ಕಂಪೆನಿಯ ಅತಿ ಸೂಕ್ಷ್ಮ ರಹಸ್ಯ ದಾಖಲೆಗಳು ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ಭಾರತದ ಭದ್ರತೆಗೆ ಭಾರಿ ಪ್ರಮಾಣದ ಅಪಾಯ ಉಂಟಾಗುವ ಭೀತಿ ವ್ಯಕ್ತವಾಗಿದೆ. ಹ್ಯಾಕಿಂಗ್ ಪರಿಣಾಮವಾಗಿ ಸೋರಿಕೆಯಾಗಿದೆ ಎಂದು ಹೇಳಲಾಗುತ್ತಿದ್ದರೂ, ಈ ಸೋರಿಕೆ ಭಾರತಕ್ಕೆ ಸಂಬಂಧಪಟ್ಟದ್ದೇ ಎನ್ನುವ ವಿಚಾರ ಗೊತ್ತಾಗಿಲ್ಲ. ತನಿಖೆಯಿಂದ ಗೊತ್ತಾಗಲಿದೆ ಎಂದು ಪರಿಕ್ಕರ‍್ ತಿಳಿಸಿದ್ದಾರೆ.