ಮಂಗಳೂರು ಕಾರಾಗೃಹಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಚ್.ಎಲ್. ದತ್ತು ಭೇಟಿ
ಮಂಗಳೂರು, ಆ.24: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್.ಎಚ್.ಆರ್.ಸಿ) ಅಧ್ಯಕ್ಷ ನ್ಯಾಯಮೂರ್ತಿ ಎಚ್.ಎಲ್. ದತ್ತು ಅವರು ಬುಧವಾರ ನಗರದ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದರು.
ಕಾರಾಗೃಹದ ಸೆಲ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು ಖೈದಿಗಳ ಅಹವಾಲು ಆಲಿಸಿದರು. ಮಹಿಳಾ ಖೈದಿಗಳ ಜೈಲಿಗೂ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಜೈಲು ಅಧೀಕ್ಷಕರ ಕೊಠಡಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ವಿಚಾರಣಾಧೀನ ಖೈದಿಗಳನ್ನು ನಿಗದಿತ ದಿನದಂದು ನ್ಯಾಯಾಲಯಕ್ಕೆ ಹಾಜರುಪಡಿಸಲು ಒತ್ತು ನೀಡಬೇಕು. ಅಲ್ಲದೇ, ಇದು ಸಾಧ್ಯವಾಗದಿದ್ದರೆ, ವೀಡಿಯೊ ಕಾನ್ಫೆರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಅವರು ತಿಳಿಸಿದರು.
ನ್ಯಾಯಾಲಯಕ್ಕೆ ಹಾಜರಾಗಲಾಗದ ಖೈದಿಗಳಿಗೆ ಮುಂದಿನ ನ್ಯಾಯಾಲಯ ವಿಚಾರಣಾ ದಿನಾಂಕದ ಮಾಹಿತಿ ನೀಡಬೇಕು. ಕಾರಾಗೃಹದಲ್ಲಿ ಖೈದಿಗಳಿಗೆ ಅಗತ್ಯ ಮೂಲಸೌಕರ್ಯ ಸಮರ್ಪಕವಾಗಿರಬೇಕು ಎಂದು ಜೈಲು ಅಧೀಕ್ಷಕರಿಗೆ ಸೂಚಿಸಿದರು. ಖೈದಿಗಳಲ್ಲಿ ಜೈಲಿನಲ್ಲಿ ಖಿನ್ನತೆ ಮೂಡದಿರಲು ಯೋಗ ಮತ್ತಿತ್ತರ ದೈಹಿಕ ಕಸರತ್ತುಗಳ ತರಬೇತಿ ನೀಡಲು ಪರಿಶೀಲಿಸುವಂತೆ ಜೈಲು ಅಧೀಕ್ಷಕರಿಗೆ ತಿಳಿಸಿದ ಅವರು, ಖೈದಿಗಳ ಆರೋಗ್ಯವನ್ನು ನಿಯಮಿತವಾಗಿ ವೈದ್ಯರಿಂದ ಪರಿಶೀಲಿಸಲು ಅವರು ತಿಳಿಸಿದರು.
ವಕೀಲರನ್ನು ನೇಮಿಸದ ಖೈದಿಗಳಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಕಾನೂನು ನೆರವು ನೀಡಲು ಅವರು ಪ್ರಾಧಿಕಾರಕ್ಕೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ನ್ಯಾಯಮೂರ್ತಿ ಎಚ್.ಎಲ್. ದತ್ತು ಅವರು ಇತ್ತೀಚೆಗೆ ಮಂಗಳೂರು ಜೈಲಿನಲ್ಲಿ ನಡೆದ ಖೈದಿಗಳಿಬ್ಬರ ಹತ್ಯೆ ಪ್ರಕರಣಗಳ ಸಂಬಂಧ ಕಡತಗಳನ್ನು ಪರಿಶೀಲಿಸಿದರು.
ಎನ್.ಎಚ್.ಆರ್.ಸಿ. ಅಧ್ಯಕ್ಷರಿಗೆ ಮಾಹಿತಿ ನೀಡಿದ ಜೈಲು ಅಧೀಕ್ಷಕ ಕೃಷ್ಣಮೂರ್ತಿ, ಮಂಗಳೂರಿನಲ್ಲಿ ನೂತನ ಸೆಂಟ್ರಲ್ ಜೈಲು ನಿರ್ಮಿಸಲು ಈಗಾಗಲೇ ಬಂಟ್ವಾಳ ತಾಲೂಕಿನ ಚೇಳೂರು, ಕುರ್ನಾಡು ಎಂಬಲ್ಲಿ 63 ಎಕರೆ ಜಮೀನು ಮಂಜೂರಾಗಿ, ಕಾರಾಗೃಹ ಇಲಾಖೆಗೆ ಹಸ್ತಾಂತರವಾಗಿದೆ. ನೂತನ ಕಾರಾಗೃಹ ನಿರ್ಮಾಣ ಸಂಬಂಧ ಮಾಸ್ಟರ್ ಪ್ಲಾನ್ ತಯಾರಿಸಲು ಲೋಕೋಪಯೋಗಿ ಇಲಾಖೆಗೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಪೊಲೀಸ್ ಆಯುಕ್ತ ಚಂದ್ರಶೇಖರ್ ಮಾತನಾಡಿ, ಖೈದಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿಎಆರ್ ಪೊಲೀಸರೊಂದಿಗೆ, ಠಾಣಾ ಕರ್ತವ್ಯದಲ್ಲಿರುವ ಸಿವಿಲ್ ಪೊಲೀಸರನ್ನು ನಿಯೋಜಿಸಲಾಗುತ್ತಿದೆ ಎಂದರು.
ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ, ಹಿರಿಯ ಸಿವಿಲ್ ನ್ಯಾಯಾಧೀಶ ಮಲ್ಲನಗೌಡ, ಮಹಾನಗರಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್, ಎಎಸ್ಪಿ ವೇದಮೂರ್ತಿ, ವಿವಿಧ ಇಲಾಖಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.