×
Ad

ಮೊಬೈಲ್ ಟವರ್‌ಗಳಿಂದ ಬ್ಯಾಟರಿಗಳನ್ನು ಕದಿಯುತ್ತಿದ್ದ ಖದೀಮರ ಬಂಧನ

Update: 2016-08-24 18:27 IST

ಮಂಗಳೂರು, ಆ.24: ಮೊಬೈಲ್ ಟವರ್‌ಗಳ ಬಳಿ ಇರುವ ಬ್ಯಾಟರಿಗಳನ್ನು ಕಳವುಗೈಯುತ್ತಿದ್ದ 5 ಮಂದಿಯನ್ನು ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿ 15 ಲಕ್ಷ ರೂ. ಮೌಲ್ಯದ ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ಎಂ. ಚಂದ್ರಶೇಖರ್ ತಿಳಿಸಿದ್ದಾರೆ.

ಮಂಗಳೂರು ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಪದವು ಗ್ರಾಮದ ಕುಲಶೇಖರ ನಂದಿನಿ ಹಾಲಿನ ಡೈರಿ ಬಸ್ ನಿಲ್ದಾಣದ ಬಳಿಯಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಆರೋಪಿಗಳಾದ ಮಡಿಕೇರಿಯ ಗಣೇಶ್, ಮಂಜೇಶ್ವರದ ಕುಂಜತ್ತೂರಿನ ಮುಹಮ್ಮದ್ ರಶೀದ್, ಮಲ್ಲೂರು ಕುಟ್ಟಿಕಳದ ಸುನೀಲ್, ಬಜಾಲ್ ಕುಡ್ತಡ್ಕದ ಪ್ರತಾಪ್ ಹಾಗೂ ವಾಮಂಜೂರು ಮೂಡುಶೆಡ್ಡೆಯ ಅವಿ ಯಾನೆ ಅವಿನಾಶ್ ಎಂಬವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಬಂಧಿತರಿಂದ ಕೃತ್ಯವೆಸಗಲು ಬಳಸಿದ ಮಾರುತಿ ಓಮ್ನಿ ಹಾಗೂ ಸ್ಪಾನರ್‌ಗಳನ್ನು ಮತ್ತು ಬ್ಯಾಟರಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದರು.

ಬಂಧಿತರಿಂದ ಕಾವೂರು ಪೊಲೀಸ್ ಠಾಣಾ ಸರಹದ್ದಿನ ಶಾಂತಿನಗರದ ಮುರಗುಡ್ಡೆ ಎಂಬಲ್ಲಿ ಮೊಬೈಲ್ ಟವರಿಗೆ ಅಳವಡಿಸಿದ 1.5 ಲಕ್ಷ ರೂ. ಮೌಲ್ಯದ 24 ಬ್ಯಾಟರಿ, ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಬಜಪೆ ಕಟೀಲು ರಸ್ತೆಯ ತೆಂಕ ಎಕ್ಕಾರು ಗ್ರಾಮದ ಶಿಬರೂರು ದ್ವಾರದ ಬಳಿ ಮೊಬೈಲ್ ಟವರಿಗೆ ಅಳವಡಿಸಿದ 1.5 ಲಕ್ಷ ರೂ. ಮೌಲ್ಯದ  24 ಬ್ಯಾಟರಿಗಳು, ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಹೊನ್ನೆಪದವು ಎಂಬಲ್ಲಿ ಮೊಬೈಲ್ ಟವರಿಗೆ ಅಳವಡಿಸಿದ 1.5 ಲಕ್ಷ ರೂ. ಮೌಲ್ಯದ 24 ಬ್ಯಾಟರಿಗಳು, ಕಾವೂರು ಪೊಲೀಸ್ ಠಾಣಾ ವ್ಯಾಫ್ತಿಯ ಮೂಡುಶೆಡ್ಡೆಯ ಗ್ರಾಮ ಪಂಚಾಯತ್ ಕಚೇರಿಯ ಬಳಿ ಮೊಬೈಲ್ ಟವರಿಗೆ ಅಳವಡಿಸಿದ 1.5 ಲಕ್ಷ ರೂ. ಮೌಲ್ಯದ  24 ಬ್ಯಾಟರಿಗಳು, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲೂರು ಗ್ರಾಮದ ತುಂಡುಪದವು ಎಂಬಲ್ಲಿ ಮೊಬೈಲ್ ಟವರಿಗೆ ಅಳವಡಿಸಿದ 1.5 ಲಕ್ಷ ರೂ. ಮೌಲ್ಯದ  24 ಬ್ಯಾಟರಿಗಳು, ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಚಾಡಿಯ ಮಂದಾರಬೈಲು ಎಂಬಲ್ಲಿ ಮೊಬೈಲ್ ಟವರಿಗೆ ಅಳವಡಿಸಿದ 1.5 ಲಕ್ಷ ರೂ. ಮೌಲ್ಯದ  24 ಬ್ಯಾಟರಿಗಳು, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕುಲಶೇಖರದ ಮಂಜುನಾಥ ಟಯರ್ ವರ್ಕ್ಸ್ ಬಳಿ ಮೊಬೈಲ್ ಟವರಿಗೆ ಅಳವಡಿಸಿದ 1.5 ಲಕ್ಷ ರೂ. ಮೌಲ್ಯದ  24 ಬ್ಯಾಟರಿಗಳು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಚಿ ಗ್ರಾಮದ ಕುಕ್ಕಾಜೆ ಎಂಬಲ್ಲಿ ಮೊಬೈಲ್ ಟವರಿಗೆ ಅಳವಡಿಸಿದ 1.5 ಲಕ್ಷ ರೂ.ಮೌಲ್ಯದ  22 ಬ್ಯಾಟರಿಗಳು, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕುಲಶೇಖರದ ಮಂಜುನಾಥ ಟಯರ್ ವರ್ಕ್ಸ್ ಬಳಿ ಮೊಬೈಲ್ ಟವರಿಗೆ ಅಳವಡಿಸಿದ 15 ಸಾವಿರ ರೂ. ಮೌಲ್ಯದ ಬ್ಯಾಟರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಕಾರ್ಯಾಚರಣೆಯನ್ನು ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಶ್ರುತಿ ಎನ್.ಎಸ್ ನಿರ್ದೇಶನದಂತೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮುಹಮ್ಮದ್ ಶರೀಫ್, ಪಿಎಸ್ಸೈ ಸುಧಾಕರ್, ಅಪರಾಧ ವಿಭಾಗದ ಪಿಎಸ್ಸೈ ವೆಂಕಟೇಶ್ ಐ., ಮತ್ತು ಸಿಬ್ಬಂದಿ ಸುಭಾಶ್ಚಂದ್ರ, ಮೋಹನ್, ಸುಧಾಕರ್ ರಾವ್, ಚಂದ್ರಶೇಖರ್ ಆಚಾರ್ಯ ಮತ್ತು ಪಿ.ಸಿಗಳಾದ ಮೆಲ್ವಿನ್ ಪಿಂಟೋ , ಕುಶಲ್ ಹೆಗ್ಡೆ, ಮಂಜುನಾಥ್ ಎನ್ ಹಾಗೂ ಶರಣಪ್ಪ ಕಾಳಿ ನಡೆಸಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ಕೆ.ಎಂ.ಶಾಂತರಾಜು, ಡಾ.ಸಂಜೀವ ಎಂ ಪಾಟೀಲ್ , ಎಸಿಪಿ ಶ್ರುತಿ ಎನ್.ಎಸ್. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News