ಒಲಿಂಪಿಯನ್ ಸಿಂಧುವಿನ ಹೆಸರು ಮರೆತು ಕರ್ನಾಟಕದವಳೆಂದ ಖಟ್ಟರ್!
ಬಹದ್ದೂರ್‌ಗಡ(ಹರ್ಯಾಣ), ಆ.24: ಹರ್ಯಾಣದ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಒಲಿಂಪಿಕ್ಸ್ ಪದಕ ವಿಜೇತೆ ಭಾರತೀಯ ಶಟ್ಲರ್ ಪಿ.ವಿ. ಸಿಂಧು ಅವರ ಹೆಸರನ್ನು ಮರೆತು, ಆಕೆ ಕರ್ನಾಟಕದವರೆಂದು ಹೇಳಿ ಮುಜುಗರಕ್ಕೊಳಗಾದ ಪ್ರಸಂಗ ಬುಧವಾರ ನಡೆದಿದೆ.
ಬಹದ್ದೂರ್‌ಗಡದಲ್ಲಿ ದೇಶಕ್ಕೆ ಒಲಿಂಪಿಕ್ಸ್ ಕಂಚು ತಂದ ರೆಸ್ಲರ್ ಸಾಕ್ಷಿ ಮಲಿಕ್‌ರ ಸನ್ಮಾನ ಸಮಾರಂಭದಲ್ಲಿ ಭಾಷಣ ಮಾಡುತ್ತಿದ್ದ ಖಟ್ಟರ್, ರಕ್ಷಾಬಂಧನದ ದಿನ ನಮ್ಮ ಇಬ್ಬರು ಕುವರಿಯರು ದೇಶದ ಹೆಸರನ್ನು ಎತ್ತರಕ್ಕೊಯ್ದಿದ್ದಾರೆ. ಇದು ನಮಗೆ ಹೆಮ್ಮೆಯ ವಿಷಯವಾಗಿದೆ. ಅವರಲ್ಲೊಬ್ಬರು ಹರ್ಯಾಣದ ಸಾಕ್ಷಿ ಮಲಿಕ್ ಹಾಗೂ ಮತ್ತೊಬ್ಬರು ಕರ್ನಾಟಕದ.. (ಹತ್ತಿರ ಇದ್ದವರಲ್ಲಿ ಹೆಸರೇನೆಂದು ಕೇಳಿಕ ಬಳಿಕ) ಸಿಂಧು.. ಪಿ.ವಿ. ಸಿಂಧು ಅವರು ರಜತ ಪದಕ ಪಡೆದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಅವರು, ಸಾಕ್ಷಿ ಹಾಗೂ ಅವರ ಕುಟುಂಬಕ್ಕೆ ಹಲವು ಬಹುಮಾನಗಳನ್ನು ಘೋಷಿಸಿದರು.
ಖಟ್ಟರ್ ಸರಕಾರವು ಹೈದರಾಬಾದ್ ಮೂಲದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರಿಗೆ ರೂ. 50 ಲಕ್ಷ ಬಹುಮಾನ ಘೋಷಿಸಿರುವುದು ಗಮನಾರ್ಹವಾಗಿದೆ.