ತೊಕ್ಕೊಟ್ಟು: ಆಮ್ನೆಸ್ಟಿ ಸಂಸ್ಥೆ ವಿರುದ್ಧ ಬಿಜೆಪಿ ಪ್ರತಿಭಟನೆ
ಉಳ್ಳಾಲ, ಆ.24: ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆಯ ವಿರುದ್ಧ ಬಿಜೆಪಿ ಮಂಗಳೂರು ವಿದಾನಸಭಾ ಕ್ಷೇತ್ರದ ವತಿಯಿಂದ ಬುಧವಾರ ತೊಕ್ಕೊಟ್ಟುವಿನಲ್ಲಿ ಪ್ರತಿಭಟನೆ ನಡೆಯಿತು.
ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ರಾಜೇಶ್ ಶೆಟ್ಟಿ ಪಜೀರುಗುತ್ತು ಮಾತನಾಡಿ, ಭದ್ರತಾ ಸಿಬ್ಬಂದಿ ವಿರುದ್ಧವೇ ಅವಹೇಳನಕಾರಿಯಾಗಿ ಮಾತನಾಡುವ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆಯ ರಕ್ಷಣೆಗೆ ಹೊರಟಿರುವ ರಾಜ್ಯ ಕಾಂಗ್ರೆಸ್ ಸರಕಾರವು ಇಲಿಗಳನ್ನು ಬಿಟ್ಟು ಬೆಕ್ಕನ್ನು ಬೇಟೆಯಾಡುವ ನಾಟಕ ಮಾಡುತ್ತಿದೆ ಎಂದು ಲೇವಡಿ ಮಾಡಿದರು.
ನಮ್ಮ ದೇಶದಲ್ಲಿ ಈ ಹಿಂದೆ ಅನೇಕ ಬೇನಾಮಿ ಎನ್‌ಜಿಒಗಳು ವಿದೇಶದಿಂದ ಬರುವಂತಹ ಬಂಡವಾಳದಿಂದ ದೇಶದ್ರೋಹಿ ಕಾರ್ಯಗಳನ್ನು ನಡೆಸುತ್ತಿದ್ದವು.ಆದರೆ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಇಂತಹ ಬೇನಾಮಿ ಎನ್‌ಜಿಒಗಳಿಗೆ ಬ್ರೇಕ್ ಬೀಳುತ್ತಿದ್ದು ದೇಶದ್ರೋಹಿ ಸಂಘಟಕರ ತುರಿಕೆಗೆ ಕಾರಣವಾಗಿದೆ. ಎನ್‌ಜಿಒಗಳಿಗೆ ಪ್ರಧಾನಿ ಕಾರ್ಯಶೈಲಿಯ ವಿರುದ್ಧ ತುರಿಕೆ ತಾರಕಕ್ಕೇರಿ ಇದೀಗ ಯುವ ವಿದ್ಯಾರ್ಥಿಗಳಿಗೆ ದೇಶದ್ರೋಹದ ವಿಷ ಬೀಜ ಬಿತ್ತುವ ಹಲಾಲ್‌ಕೋರ ಕೆಲಸ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಮಿತಾ ಶ್ಯಾಂ ಮಾತನಾಡಿ, ಭಾರತೀಯ ಸೈನಿಕರೆಂದರೆ ಕೇವಲ ಬಿಜೆಪಿಗರ ರಕ್ಷಕರಲ್ಲ. ಅವರು ಶ್ರಮಪಟ್ಟು ದೇಶದ ಎಲ್ಲ ವರ್ಗದ ಜನರಿಗೂ ಭದ್ರತೆ ಒದಗಿಸುತ್ತಿದ್ದಾರೆ. ನಮ್ಮ ಭದ್ರತಾ ವ್ಯವಸ್ಥೆ ಬಗ್ಗೆಯೇ ಅವಹೇಳನಕಾರಿಯಾಗಿ ವಾತನಾಡಿದ ಆಮ್ನೆಸ್ಟಿ ಸಂಸ್ಥೆಯನ್ನು ಕ್ವಿಟ್ ಇಂಡಿಯಾ ಚಳವಳಿ ರೀತಿಯಲ್ಲಿ ಭಾರತದಿಂದ ಒದ್ದೋಡಿಸುವ ಕೆಲಸ ಮಾಡಬೇಕೆಂದು ಹೇಳಿದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್,ಮಾಜಿ ಶಾಸಕ ಜಯರಾಮ ಶೆಟ್ಟಿ,ರಾಜ್ಯ ಕಾರ್ಯಕಾರಿಣಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು, ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಹಾಜಿ ಕೆ.ಎ. ಮುನೀರ್ ಬಾವ, ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ಮನೋಜ್ ಆಚಾರ್ಯ,ಮೋಹನ್‌ರಾಜ್ ಯು., ಸೋಮೇಶ್ವರ ಕ್ಷೇತ್ರ ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ರಾಜೀವಿ ಕೆಂಪು ಮಣ್ಣು, ಧನ್ಯವತಿ, ದೇವಕಿ ರಾಘವ, ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪಾ ಶೆಟ್ಟಿ, ಮಾಜಿ ಪುರಸಭಾ ಸದಸ್ಯರಾದ ಲಲಿತಾ ಸುಂದರ್, ಭಗವಾನ್‌ದಾಸ್ ಈ ಸಂದರ್ಭ ಉಪಸ್ಥಿತರಿದ್ದರು.