ಬಿ.ಸಿ.ರೋಡ್: ಟೂರಿಸ್ಟ್ ಕಾರು ಮತ್ತು ವ್ಯಾನು ಚಾಲಕ, ಮಾಲಕರ ಸಂಘದ ವಾರ್ಷಿಕ ಮಹಾಸಭೆ

Update: 2016-08-24 13:43 GMT

ಬಂಟ್ವಾಳ, ಆ. 24: ದಕ್ಷಿಣ ಕನ್ನಡ ಜಿಲ್ಲಾ ಟೂರಿಸ್ಟ್ ಕಾರು ಮತ್ತು ವ್ಯಾನ್ ಚಾಲಕ, ಮಾಲಕರ ಸಂಘ ಬಿ.ಸಿ.ರೋಡ್ ಇದರ 33ನೆ ವಾರ್ಷಿಕ ಮಹಾಸಭೆ ಮತ್ತು ಸಾಧಕರ ಅಭಿನಂದನಾ ಕಾರ್ಯಕ್ರಮ ಮಂಗಳವಾರ ಬಿ.ಸಿ.ರೋಡ್ ಸ್ತ್ರೀಶಕ್ತಿ ಸಭಾಭವನದಲ್ಲಿ ಬಂಟ್ವಾಳ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಘಟನೆಯ ಮೂಲಕ ಸಮಾಜಕ್ಕೆ ಪೂರಕ ಕೆಲಸಗಳು ಆಗಬೇಕು. ಉತ್ತಮ ಕೆಲಸ ಮಾಡಿರುವ ಸಂಚಾರ ಠಾಣಾಧಿಕಾರಿ ಚಂದ್ರಶೇಖರಯ್ಯ, ಸಂಘದ ಮಾಜಿ ಅಧ್ಯಕ್ಷ ಜೆ., ಕೃಷ್ಣಪ್ಪಸಫಲ್ಯ ಮೆಲ್ಕಾರ್‌ರನ್ನು ಗುರುತಿಸಿ ಗೌರವಿಸಿರುವುದು ಇತರರಿಗೆ ಪ್ರೇರಣೆ ಆಗುವುದು. ಸಮಾಜದಲ್ಲಿ ಪ್ರತಿಯೊಬ್ಬರು ಒಬ್ಬರಿಗೊಬ್ಬರು ಪೂರಕವಾಗಿ ಕೆಲಸ ಮಾಡಿದಾಗ ಅಭಿವೃದ್ಧಿ ಸಾಧ್ಯವಾಗುವುದು ಎಂದರು.

ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಮಾತನಾಡಿ, ಸರಕಾರಿ ನೌಕರನೊಬ್ಬ ತನ್ನ ವ್ಯವಸ್ಥೆಯಲ್ಲಿ ಇರುವಂತಹ ಅಧಿಕಾರವನ್ನು ಬಳಸಿ ಸಮಾಜಕ್ಕೆ ಬೇಕಾದ ಕೆಲಸ ಮಾಡಿದಾಗ ಜನರು ಎಂದೂ ಇಂತಹ ಅಧಿಕಾರಿಯನ್ನು ಮರೆಯುವುದಿಲ್ಲ. ಅದಕ್ಕೆ ಇಲ್ಲಿನ ಸಂಚಾರ ಠಾಣಾಧಿಕಾರಿ ಉದಾಹರಣೆ ಆಗುತ್ತಾರೆ. ಅಧಿಕಾರದ ಮೂಲಕ ಸಿಗುವ ಗೌರವಕ್ಕಿಂತ ಜನಪರ ಕೆಲಸದ ಮೂಲಕ ಒಬ್ಬ ಅಧಿಕಾರಿಗೆ ಸಿಗುವ ಗೌರವ ಸಂದಾಯ ಶ್ರೇಷ್ಠವಾಗಿದೆ ಎಂದು ವಿವರಿಸಿದರು.

ಬಂಟ್ವಾಳ ಕಸಾಪ ಅಧ್ಯಕ್ಷ ಕೆ.ಮೋಹನ ರಾವ್ ಮಾತನಾಡಿ, ಅನೇಕ ಅಧಿಕಾರಿಗಳು ಸರಕಾರಿ ಸೇವೆಗೆ ಬಂದಾಗ ಅವರ ಕರ್ತವ್ಯಕ್ಕೆ ಜನಸಾಮಾನ್ಯರು ಸ್ಪಂದಿಸಿ ಗೌರವಿಸುವುದು ಕಡಿಮೆ. ಆದರೆ ಪೊಲೀಸರು ಎಂದರೆ ಸಾಮಾನ್ಯವಾಗಿ ಜನರು ದೂರ ಇರಲು ಪ್ರಯತ್ನಿಸುತ್ತಾರೆ. ಇಲ್ಲಿ ಸಮಾಜಸ್ನೇಹಿ ಪೊಲೀಸ್ ಅಧಿಕಾರಿಯನ್ನು ಗುರುತಿಸುವ ಕೆಲಸ ಆಗಿದೆ. ಇಂತಹ ಕೆಲಸ ನಿರಂತರವಾಗಿ ಸಂಘಟನೆಗಳ ಮೂಲಕ ಆದಾಗ ಅಧಿಕಾರಿ ವರ್ಗಕ್ಕೆ ಉತ್ತಮ ಕೆಲಸ ಮಾಡಲು ಪ್ರೇರಣೆ ಆಗುವುದು ಎಂದು ವಿವರಿಸಿದರು.

ಮೆಲ್ಕಾರ್ ಸಂಚಾರ ಠಾಣೆ ಸಬ್ ಇನ್‌ಸ್ಪೆಕ್ಟರ್ ಚಂದ್ರಶೇಖರಯ್ಯ, ಸಂಘದ ಮಾಜಿ ಅಧ್ಯಕ್ಷ ಜೆ. ಕೃಷ್ಣಪ್ಪ ಸಫಲ್ಯ ಮೆಲ್ಕಾರ್‌ಗೆ ತಹಶೀಲ್ದಾರ್ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸಮ್ಮಾನಿಸಿ ಗೌರವಿಸಿದರು.

ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಕೃಷ್ಣ ಅಲ್ಲಿಪಾದೆ ಮತ್ತು ಗೋಪಾಲ ನಾಯಕ್ ಅಭಿನಂದನಾ ಪತ್ರ ವಾಚಿಸಿದರು. ಸಂಘದ ಅಧ್ಯಕ್ಷ ವಿನ್ಸೆಂಟ್ ರೊಡ್ರಿಗಸ್ ಪೆರ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕಾರಿ ಸಮಿತಿ ಸದಸ್ಯ ಬಿ.ಎಂ. ಪ್ರಭಾಕರ್ ಸ್ವಾಗತಿಸಿ ಪ್ರಸ್ತಾವನೆ ನೀಡುತ್ತಾ ಮಾತನಾಡಿ, ಸಂಘದಲ್ಲಿ ಕಳೆದ 32ವರ್ಷಗಳ ಸಂಪ್ರದಾಯವನ್ನು ಮೀರಿ ವಾರ್ಷಿಕ ಸಭೆಗೆ ಸಂಘದ ಸದಸ್ಯರಲ್ಲದ ವ್ಯಕ್ತಿಯೊಬ್ಬರಿಗೆ ಅಧ್ಯಕ್ಷ ಸ್ಥಾನಮಾನದ ಗೌರವ ನೀಡಿದ್ದು ಇದೇ ಮೊದಲು. ಇತಿಹಾಸದಲ್ಲಿ ಪ್ರಥಮವಾಗಿ ಸರಕಾರಿ ಅಧಿಕಾರಿ ಮತ್ತು ಪೊಲೀಸ್ ಅಧಿಕಾರಿಯನ್ನು ಸಭೆಗೆ ಕರೆದಿರುವುದು ಕೂಡಾ ಇದೇ ಪ್ರಥಮವಾಗಿದೆ ಎಂದರು. ಸಂಘದ ಪ್ರಧಾನ ಕಾರ್ಯದರ್ಶಿ ರಾಮ ಕುಲಾಲ್ ಗಾಂದೋಡಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News