ಸರಪಾಡಿ: ಹಿಟಾಚಿಗೆ ಹೈಟೆನ್ಷನ್ ವಿದ್ಯುತ್ ತಂತಿ ಸ್ಪರ್ಶಿಸಿ ಚಾಲಕ ಗಂಭೀರ

Update: 2016-08-24 13:53 GMT

ಬಂಟ್ವಾಳ, ಆ. 24: ಟಿಪ್ಪರ್ ಲಾರಿಯಲ್ಲಿ ಹಿಟಾಚಿ ಯಂತ್ರವನ್ನು ಸಾಗಿಸುತ್ತಿದ್ದ ವೇಳೆ ಹೈಟೆನ್ಷನ್ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಹಿಟಾಚಿ ಚಾಲಕ ಗಂಭೀರ ಗಾಯಗೊಂಡ ಘಟನೆ ಬುಧವಾರ ಸಂಜೆ ತಾಲೂಕಿನ ಸರಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರ್ಲ ಬೀಯಪಾದೆಯ ಪಟ್ಲದಡ್ಡ ಎಂಬಲ್ಲಿ ನಡೆದಿದೆ.

ಹಾಸನ ಮೂಲದ ಗುರುದತ್ (25) ಗಾಯಾಳು.

ಪಟ್ಲದಡ್ಡ ಸಮೀಪ ಕಾರ್ಯನಿರ್ವಹಿಸಲು ಹಿಟಾಚಿ ಯಂತ್ರವನ್ನು ಟಿಪ್ಪರ್‌ನಲ್ಲಿ ಹೇರಿಕೊಂಡು ಸಾಗುತ್ತಿರುವಾಗ ಹೈಟೆನ್ಷನ್ ತಂತಿ ಆಕಸ್ಮಿಕವಾಗಿ ಹಿಟಾಚಿಗೆ ತಾಗಿ ಹಿಟಾಚಿಯಲ್ಲಿದ್ದ ಚಾಲಕ ಗುರುದತ್‌ಗೆ ವಿದ್ಯುತ್ ಪ್ರವಹಿಸಿ ಉರುಳಿ ಬಿದ್ದಿದ್ದಾನೆ. ತಕ್ಷಣ ಸ್ಥಳೀಯರು ಆತನನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹೈಟೆನ್ಷನ್ ತಂತಿ ಜೋತುಬಿದ್ದಿದ್ದು ಈ ಬಗ್ಗೆ ಈ ಹಿಂದೆ ಗ್ರಾಮಸಭೆಗಳಲ್ಲಿ ಹಲವು ಬಾರಿ ಗ್ರಾಮಸ್ಥರು ಮೆಸ್ಕಾಂ ವಿರುದ್ಧ ದೂರು ನೀಡಿದ್ದರು. ಆದರೆ ಮೆಸ್ಕಾಂ ನಿರ್ಲಕ್ಷ ತೋರಿದ ಪರಿಣಾಮ ಈ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಟ್ರಾಫಿಕ್ ಎಸ್ಸೈ ಚಂದ್ರಶೇಖರಯ್ಯ, ಗ್ರಾಮಾಂತರ ಎಸ್ಸೈ ರಕ್ಷಿತ್ ಎ.ಕೆ., ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News