ಭಟ್ಕಳ: ಮೀನುಗಾರಿಕಾ ಬೋಟ್ ಮುಳುಗಡೆ; 25 ಮಂದಿ ಮೀನುಗಾರರ ರಕ್ಷಣೆ
Update: 2016-08-24 19:49 IST
ಭಟ್ಕಳ, ಆ.24: ಸುಮಾರು 25 ಮಂದಿ ಮೀನುಗಾರರು ತೆರಳಿದ್ದ ಪರ್ಸೀನ್ ಬೋಟೊಂದು ಸಮುದ್ರದಲ್ಲಿ ದುರಂತಕ್ಕೀಡಾಗಿದ್ದು, ಮೀನುಗಾರರನ್ನು ಸ್ಥಳೀಯರು ಹಾಗೂ ಕೋಸ್ಟ್‌ಗಾರ್ಡ್‌ನ ಸಿಬ್ಬಂದಿ ಕಾರ್ಯಾಚರಣೆಯ ಮೂಲಕ ರಕ್ಷಿಸಿದ ಘಟನೆ ಬುಧವಾರ ಭಟ್ಕಳ ಬಳಿಯ ನೇತ್ರಾಣಿ ದ್ವೀಪದ ಬಳಿ ಜರಗಿದೆ.
ಮುರುಡೇಶ್ವರದ ನಾಗೇಶ್‌ಎಸ್. ನಾಯ್ಕಾ ಎಂಬವರ ಅಮ್ಮಾ ಎಂಬ ಹೆಸರಿನ ಬೋಟ್ ದುರಂತಕ್ಕೀಡಾಗಿದ್ದು ಸುಮಾರು 60ಲಕ್ಷ ರೂ.ಗೂ ಹೆಚ್ಚು ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸ್ಥಳೀಯರು ಹಾಗೂ ಕೋಸ್ಟ್‌ಗಾರ್ಡ್ ಸಿಬ್ಬಂದಿಯ ಸಕಾಲಿಕ ಕಾರ್ಯಾಚರಣೆಯಿಂದ ಮಹಾ ದುರಂತವೊಂದು ತಪ್ಪಿದಂತಾಗಿದೆ.
ಇತ್ತೀಚೆಗೆ ಭಟ್ಕಳದ ದೋಣಿಯೊಂದು ಮಗುಚಿಬಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿ, ಎಂಟು ಮಂದಿ ಬದುಕುಳಿದು ದಡ ಸೇರಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.