×
Ad

ಕೌಕ್ರಾಡಿಯಲ್ಲಿ ನಾಯಿಗಳ ಮಾರಣಹೋಮ: ಪ್ರಾಣಿಪ್ರಿಯರ ಆಕ್ರೋಶ

Update: 2016-08-24 20:17 IST

ಉಪ್ಪಿನಂಗಡಿ, ಆ.24: ಕೌಕ್ರಾಡಿ ಗ್ರಾಮ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಉಪಟಳ ಜಾಸ್ತಿಯಾಗಿದೆ ಎಂಬ ದೂರಿನ ಮೇರೆಗೆ ಗ್ರಾಮ ಪಂಚಾಯತ್ ಯಾವುದೇ ಮುನ್ಸೂಚನೆ, ಪ್ರಚಾರ ನಡೆಸದೆ ಬುಧವಾರ ಏಕಾಏಕಿ ಬೀದಿ ನಾಯಿಗಳ ವಧೆಗೆ ಮುಂದಾಗಿದ್ದು, ಇದರಿಂದಾಗಿ ಹಲವರ ಸಾಕು ನಾಯಿಗಳೂ ಇದಕ್ಕೆ ಬಲಿಯಾಗುವಂತಾಗಿದೆ. ಬೀದಿ ನಾಯಿಗಳ ಸಂಹಾರಕ್ಕೆ ಮುಂದಾಗಿರುವ ಪಂಚಾಯತ್‌ನ ಕ್ರಮವು ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.

ನಾಯಿ ಹಿಡಿಯುವ ತಂಡವೊಂದು ಇಲ್ಲಿಗೆ ಬಂದು ಪೇಟೆ ಬದಿಯಲ್ಲಿ ಸಂಚರಿಸುತ್ತಿರುವ ನಾಯಿಗಳನ್ನು ಅಮಾನುಷವಾಗಿ ಹಿಡಿದೆಳೆದು ಇಂಜೆಕ್ಷನ್ ಚುಚ್ಚಿ ಕೊಲ್ಲುತ್ತಿತ್ತಲ್ಲದೆ, ನಾಯಿಗಳನ್ನು ಹಿಡಿದು ಕೊಲ್ಲುವ ಭರದಲ್ಲಿ ಈ ತಂಡವು ಸಾಕು ನಾಯಿಗಳನ್ನು ಬಲಿ ಪಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

ನಾಯಿಗಳನ್ನು ಸಂಹಾರ ನಡೆಸುವ ಮುನ್ನ ಪತ್ರಿಕಾ ಪ್ರಚಾರ, ಗ್ರಾಮ ವ್ಯಾಪ್ತಿಯಲ್ಲಿ ಮೈಕ್ ಪ್ರಚಾರ ಮಾಡಿ ಸಾಕು ನಾಯಿಗಳನ್ನು ಕಟ್ಟಿ ಹಾಕುವಂತೆ ತಿಳಿಸಬೇಕಾದುದು ನಿಯಮ. ಆದರೆ ಇಲ್ಲಿ ಎಲ್ಲವನ್ನೂ ಗಾಳಿಗೆ ತೂರಲಾಗಿದೆ. ಅದಲ್ಲದೆ ಕೌಕ್ರಾಡಿ ಗ್ರಾಮ ವ್ಯಾಪ್ತಿಯಿಂದ ಹೊರಗೆ ಇರುವ ಕೊಕ್ಕಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಕ್ಕಡ ಪೇಟೆ, ಜನ ವಸತಿ ಪ್ರದೇಶಗಳಲ್ಲಿ ನಾಯಿಗಳ ಸಂಹಾರ ಮಾಡಿದ್ದು, ಇಲ್ಲಿಯೂ ಹಲವರ ಸಾಕು ನಾಯಿಗಳು ಜೀವ ತೆತ್ತಿದೆ ಎಂದು ಪ್ರಾಣಿಪ್ರಿಯರು ಆರೋಪಿಸಿದ್ದಾರೆ.

ಕೊಕ್ಕಡದ ಪೇಟೆಯಲ್ಲಿ ಒಂದು ಹೆಣ್ಣು ನಾಯಿ ಇದ್ದು, ಅದು ಆಸುಪಾಸಿನ ಅಂಗಡಿ, ಮನೆಯವರ ಅಚ್ಚುಮೆಚ್ಚಿನ ನಾಯಿಯಾಗಿತ್ತು. ಇದು ಕೆಲ ದಿನಗಳ ಹಿಂದೆ ಹತ್ತು ಮರಿಗಳನ್ನು ಇಟ್ಟಿದ್ದು, ಈ ನಾಯಿಯೂ ಸಾವನ್ನಪ್ಪಿದೆ. ಹೀಗಾಗಿ ಇದೀಗ ಈ ಎಲ್ಲಾ ಮರಿಗಳು ತಬ್ಬಲಿಗಳಾಗಿದ್ದು, ಪ್ರಾಣಿ ಪ್ರಿಯರಿಗೆ ಆಘಾತವನ್ನು ನೀಡಿದೆ.

ದೂರುಗಳು ಬಂದಿದ್ದವು: ಅಧ್ಯಕ್ಷ

ಪಂಚಾಯತ್ ವ್ಯಾಪ್ತಿಯಲ್ಲಿ ನಾಯಿಗಳ ಉಪಟಳ ಅಧಿಕವಾಗಿತ್ತು. ಮತ್ತು ಹುಚ್ಚು ನಾಯಿ ಕಡಿತದ ಬಗ್ಗೆಯೂ ದೂರು ಬಂದಿತ್ತು. ಶಾಲಾ, ಕಾಲೇಜು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿ ದೂರು ನೀಡಿದ್ದರು. ಹೀಗಾಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಹಾರ ನಡೆಸುವ ಬಗ್ಗೆ ಪಂಚಾಯತ್ ತೀರ್ಮಾನಿಸಿದ್ದು, ಅದರಂತೆ ಕ್ರಮಕೈಗೊಳ್ಳಲಾಗಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಇಬ್ರಾಹೀಂ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News