ಬಾಡಿಗೆ ತಾಯಂದಿರ ಹಕ್ಕು ರಕ್ಷಣೆ ಮಸೂದೆಗೆ ಕೇಂದ್ರ ಸಂಪುಟ ಮಂಜೂರಾತಿ
ಹೊಸದಿಲ್ಲಿ, ಆ.24: ಬಾಡಿಗೆ ತಾಯಂದಿರ ಹಕ್ಕುಗಳನ್ನು ರಕ್ಷಿಸುವ ಹಾಗೂ ಅಂತಹ ಮಕ್ಕಳ ಪಿತೃತ್ವನ್ನು ಕಾನೂನುಬದ್ಧಗೊಳಿಸುವ ಉದ್ದೇಶದ ಕರಡು ಮಸೂದೆಯೊಂದಕ್ಕೆ ಕೇಂದ್ರ ಸಂಪುಟವಿಂದು ಅನುಮೋದನೆ ನೀಡಿದೆ.
ಆರೋಗ್ಯ ಸಚಿವಾಲಯದ ಪ್ರಸ್ತಾವದ ಪ್ರಕಾರ, ಕರಡು ಬಾಡಿಗೆ ತಾಯ್ತನ ಮಸೂದೆ-2016, ದೇಶದಲ್ಲಿ ಬಾಡಿಗೆ ತಾಯ್ತನವನ್ನು ಸೂಕ್ತ ರೀತಿಯಲ್ಲಿ ನಡೆಸುವಂತೆ ನಿಯಂತ್ರಿಸುವ ಗುರಿ ಇರಿಸಿದೆ.
ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಸಂಪುಟವು ಹಸಿರುನಿಶಾನೆ ತೋರಿಸಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.
ಸಚಿವರ ಗುಂಪೊಂದು ಇತ್ತೀಚೆಗೆ ಮಸೂದೆಯನ್ನು ಅನುಮೋದಿಸಿತ್ತು ಹಾಗೂ ಅಂತಿಮ ನಿರ್ಧಾರಕ್ಕಾಗಿ ಕೇಂದ್ರ ಸಂಪುಟಕ್ಕೆ ಕಳುಹಿಸಿತ್ತು.
ಪ್ರಧಾನಿ ಕಚೇರಿಯ ಒತ್ತಾಸೆಯಂತೆ ರಚಿಸಲಾಗಿದ್ದ ಈ ಸಚಿವರ ಗುಂಪಿನಲ್ಲಿ ಆರೋಗ್ಯ ಸಚಿವ ಜೆ.ಪಿ. ನಡ್ಡಾ, ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಆಹಾರ ಸಂಸ್ಕರಣೋದ್ಯಮ ಸಚಿವೆ ಹರ್‌ಸಿಮ್ರತ್ ಕೌರ್ ಬಾದಲ್ ಮುಂತಾದವರಿದ್ದರು.
ಪ್ರಸ್ತುತ, ಬಾಡಿಗೆ ತಾಯ್ತನವನ್ನು ನಿಯಂತ್ರಿಸುವ ಕಾಯ್ದೆಬದ್ಧ ವ್ಯವಸ್ಥೆ ಇಲ್ಲದಿರುವುದರಿಂದ, ಗ್ರಾಮೀಣ ಹಾಗೂ ಬುಡಕಟ್ಟು ಪ್ರದೇಶಗಳಲ್ಲೂ ಬಾಡಿಗೆಯ ನೆಲೆಯಲ್ಲಿ ಗರ್ಭವತಿಯರಾಗಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸಿದ್ಧಾಂತ ರಹಿತ ಶಕ್ತಿಗಳು ಮಹಿಳೆಯರನ್ನು ವಂಚಿಸುವ ಸಾಧ್ಯತೆಗೆ ದಾರಿಯಾಗಿದೆಯೆಂಬುದನ್ನು ಸರಕಾರ ಇತ್ತೀಚೆಗೆ ಒಪ್ಪ್ಪಿಕೊಂಡಿತ್ತು.