×
Ad

ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ 21 ತಿಂಗಳ ಅವಧಿಯಲ್ಲಿ 25 ಕೋಟಿ ರೂ. ವೆಚ್ಚದ ಯೋಜನೆ: ನಿವೇದಿತ್ ಆಳ್ವ

Update: 2016-08-24 20:39 IST

ಮಂಗಳೂರು, ಆ. 24: ಕರಾವಳಿ ಅಭಿವೃದ್ಧಿ ಪ್ರಾಧಿಕಾರವು ತನ್ನ 21 ತಿಂಗಳ ಅಧಿಕಾರಾವಧಿಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ವಿವಿಧ ಯೋಜನೆಗಳನ್ನು ರೂಪಿಸಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ನಿವೇದಿತ್ ಆಳ್ವ ತಿಳಿಸಿದ್ದಾರೆ.

ಪ್ರಾಧಿಕಾರದ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಧಿಕಾರದ ವ್ಯಾಪ್ತಿಗೆ ಬರುವ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಗತ್ಯಕ್ಕೆನುಸಾರವಾಗಿ ಕಾಲು ಸಂಕ, ಮೀನುಮಾರುಕಟ್ಟೆ, ಚರಂಡಿ, ಪಾರ್ಕ್, ಸ್ಕೈವಾಕ್ ಮೊದಲಾದ ಯೋಜನೆಗಳನ್ನು ರೂಪಿಸಿ ಸಾಧನೆ ಮಾಡಿದೆ ಎಂದರು.

ಈ ಹಿಂದೆ ವರ್ಷಕ್ಕೆ ಒಂದು ಕೋಟಿ ರೂ. ಮಾತ್ರ ಅನುದಾನ ಸಿಕ್ಕಿದೆ. ಅದರಲ್ಲೂ ಬಹುಪಾಲು ಸರಕಾರಕ್ಕೆ ವಾಪಸು ಹೋಗಿದೆ. ಆದರೆ, ತನ್ನ ಅಧಿಕಾರಾವಧಿಯಲ್ಲಿ 2015-16ನೆ ಸಾಲಿನಲ್ಲಿ 10 ಕೋಟಿ ರೂ. ಹಾಗೂ 2016-17ನೆ ಸಾಲಿನಲ್ಲಿ 15 ಕೋಟಿ ರೂ. ಅನುದಾನ ಲಭಿಸಿದೆ. ಈ ಅನುದಾನವನ್ನು ಸದ್ಬಳಕೆ ಮಾಡಿದ್ದೇವೆ. ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನ ಸೈಟ್‌ನ್ನು ಭೇಟಿ ಮಾಡಿ ಅನಂತವೇ ಕಾಮಗಾರಿಯನ್ನು ಪ್ರಾರಂಭಿಸಿದ್ದೇನೆ. ಮೂರೂ ಜಿಲ್ಲೆಗಳ 19 ಕ್ಷೇತ್ರಗಳ 136 ಸ್ಥಳಗಳನ್ನು ಪರಿಶೀಲಿಸಲು 83 ಸಾವಿರ ಕಿ.ಮೀ. ಸಂಚರಿಸಿದ್ದೇನೆ. ಪ್ರಾಧಿಕಾರದ ವ್ಯಾಪ್ತಿಗೆ ಬರುವ ಎಲ್ಲಾ ಕ್ಷೇತ್ರಗಳಿಗೂ ಆದ್ಯತೆ ನೀಡಿದ್ದೇನೆ ಎಂದು ನಿವೇದಿತ್ ಆಳ್ವ ವಿವರಿಸಿದರು.

2015-16ನೆ ಸಾಲಿನಲ್ಲಿ ಮೂರೂ ಜಿಲ್ಲೆಗಳಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಏಳು ಮಾರುಕಟ್ಟೆಗಳು, ಎರಡು ಉದ್ಯಾನವನ, ಒಂದು ಪ್ರವಾಸಿ ತಾಣವನ್ನು ಅಭಿವೃದ್ಧಿಪಡಿಸಲಾಗಿದೆ. 2016-17ರಲ್ಲಿ 15 ಕೋಟಿ ರೂ. ವೆಚ್ಚದಲ್ಲಿ 73 ಕಾಲು ಸಂಕ, 7 ಮೀನು ಮಾರುಕಟ್ಟೆ, ಒಂದು ಸ್ಕೈವಾಕ್, ಎರಡು ಉದ್ಯಾನವನ, ಮೂರು ಚರಂಡಿ, ನಾಲ್ಕು ಅಂಗನವಾಡಿ, ಒಂದು ಕುಡಿಯುವ ನೀರು ಸರಬರಾಜು ಯೋಜನೆ ಮತ್ತು ಎರಡು ತೂಗು ಸೇತುವೆ ನಿರ್ಮಿಸಲಾಗುತ್ತಿದೆ ಎಂದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಅರುಣ್ ಕುವೆಲ್ಲೊ, ಕಾರ್ಯದರ್ಶಿ ಪ್ರದೀಪ್ ಡಿಸೋಜ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News