ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಮೂಳೆಗಳ ಡಿಎನ್‌ಎ ಪರೀಕ್ಷೆಗೆ ನ್ಯಾಯಾಲಯ ಒಪ್ಪಿಗೆ

Update: 2016-08-24 15:33 GMT

ಉಡುಪಿ, ಆ.24: ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳೆಯಲ್ಲಿ ಪತ್ತೆಯಾಗಿದ್ದ ಮೂಳೆಗಳು ಭಾಸ್ಕರ್ ಶೆಟ್ಟಿಯವರದ್ದೆ ಎಂಬು ದನ್ನು ದೃಢಪಡಿಸಲು ಡಿಎನ್‌ಎ ಪರೀಕ್ಷೆಗೆ ಅನುಮತಿ ಕೋರಿ ಸಲ್ಲಿಸಿದ ಮನವಿಗೆ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಹೆಚ್ಚುವರಿ ಮುಖ್ಯನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಧೀಶ ರಾಜೇಶ್ ಕರ್ಣನ್ ಇಂದು ಒಪ್ಪಿಗೆ ನೀಡಿದ್ದಾರೆ.

ಭಾಸ್ಕರ್ ಶೆಟ್ಟಿಯ ತಾಯಿ ಹಾಗೂ ಸಹೋದರರ ರಕ್ತದ ಸ್ಯಾಂಪಲ್‌ನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಲು ಅನುಮತಿ ಕೋರಿ ಪೊಲೀಸರು ಆ.13 ರಂದು ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದರು. ಅದರ ವಿಚಾರಣೆಯನ್ನು ಆ.18ಕ್ಕೆ ನಡೆಸಲಾಗಿತ್ತು. ಆಗ ಹಿರಿಯ ಸಹಾಯಕ ಸರಕಾರಿ ಅಭಿಯೋಜ ಕರು ಅದಕ್ಕೆ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಅದನ್ನು ಆ.24ಕ್ಕೆ ಮುಂದೂಡಲಾಗಿತ್ತು.

ಇಂದು ವಿಚಾರಣೆ ನಡೆಸಿದ ನ್ಯಾಯಾಧೀಶರು ಡಿಎನ್‌ಎ ಪರೀಕ್ಷೆಗೆ ಒಪ್ಪಿ ಸೂಚಿಸಿ ಭಾಸ್ಕರ್ ಶೆಟ್ಟಿ ತಾಯಿ ಗುಲಾಬಿ ಶೆಡ್ತಿ ಹಾಗೂ ಸಹೋದರರಿಗೆ ರಕ್ತದ ಸ್ಯಾಂಪಲ್ ನೀಡುವಂತೆ ನೋಟೀಸು ಜಾರಿಗೊಳಿಸಿದ್ದಾರೆ.

ಜಾಮೀನು ವಿಚಾರಣೆ ಮುಂದಕ್ಕೆ: ಪ್ರಕರಣದ ಆರೋಪಿಗಳಾದ ಶ್ರೀನಿವಾಸ ಭಟ್ ಹಾಗೂ ರಾಘವೇಂದ್ರರಿಗೆ ಜಾಮೀನು ನೀಡುವಂತೆ ಇದೇ ಕೋರ್ಟ್ ಮುಂದೆ ಅವರ ವಕೀಲ ವಿಕ್ರಂ ಹೆಗ್ಡೆ ಆ.18ರಂದು ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿ ನ್ಯಾಯಾಧೀಶ ರಾಜೇಶ್ ಕರ್ಣನ್ ಅದನ್ನು ಈ ದಿನಕ್ಕೆ ಮುಂದೂಡಿದರು. ಆದರೆ ಇಂದು ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಪ್ರವೀಣ್ ಕುಮಾರ್ ಆರ್.ಎನ್. ಈ ಬಗ್ಗೆ ಮತ್ತೆ ಕಾಲಾವಕಾಶ ನೀಡುವಂತೆ ನ್ಯಾಯಾ ಧೀಶರಲ್ಲಿ ಕೇಳಿಕೊಂಡರು. ಆ ಹಿನ್ನೆಲೆಯಲ್ಲಿ ಅವರು ಜಾಮೀನು ಅರ್ಜಿಯ ವಿಚಾರಣೆಯನ್ನು ಆ.29ಕ್ಕೆ ಮುಂದೂಡಿ ಆದೇಶ ನೀಡಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜೇಶ್ವರಿ ಹಾಗೂ ನವನೀತ್ ಪರ ವಕೀಲ ಅರುಣ್ ಬಂಗೇರ ಬೆಳುವಾಯಿ, ಸದ್ಯಕ್ಕೆ ರಾಜೇಶ್ವರಿ ಹಾಗೂ ನವನೀತ್ ಅವರಿಗೆ ಜಾಮೀನು ಕೋರಿ ಅರ್ಜಿ ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.

ನಿರಂಜನ್‌ಗೆ ವಕೀಲರಿಲ್ಲ!

ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಾದ ತಾಯಿ ಮಗನ ಪರವಾಗಿ ಮಂಗಳೂರಿನ ನ್ಯಾಯವಾದಿಗಳಾದ ಅರುಣ್ ಬಂಗೇರ ಬೆಳುವಾಯಿ ಮತ್ತು ಅರುಣ್ ಕುಮಾರ್ ಶೆಟ್ಟಿ ಬಂಟ್ವಾಳ ವಕಾಲತ್ತು ವಹಿಸಲಿದ್ದು, ಇಂದು ಅವರನ್ನು ಕೋರ್ಟ್‌ಗೆ ಹಾಜರುಪಡಿಸುವ ಸಂದರ್ಭದಲ್ಲಿ ಅವರಿಬ್ಬರು ಉಪಸ್ಥಿತರಿದ್ದರು.

ಅದೇ ರೀತಿ ಸಾಕ್ಷನಾಶ ಆರೋಪಿಗಳಾದ ಶ್ರೀನಿವಾಸ ಭಟ್ ಹಾಗೂ ರಾಘವೇಂದ್ರ ಭಟ್‌ಗೆ ಮಂಗಳೂರಿನ ವಕೀಲ ವೈ.ವಿಕ್ರಂ ಹೆಗ್ಡೆ ನಿಯೋಜನೆಗೊಂಡು ಅವರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಪ್ರಕರಣದ ಪ್ರಮುಖ ಆರೋಪಿಯಲ್ಲಿ ಒಬ್ಬರಾದ ನಿರಂಜನ್ ಭಟ್ ಇನ್ನೂ ತನ್ನ ಪರ ವಾದಿಸಲು ವಕೀಲರನ್ನು ಗೊತ್ತುಪಡಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News